ಬಾಗಿಲಲ್ಲೇ ಭಕ್ತರ ಭಕ್ತಿ ಸಮರ್ಪಣೆ

KLDG NEWS 21-1
Published on

ಕಲಾದಗಿ: ಬಂದ್ ಆದ ಮಹಾದ್ವಾರದ ಬಳಿಯೇ ಒಳಗಿನ ದೇವರಿಗೆ ಕೈ ಮುಗಿಯುತ್ತ ಭಕ್ತಿ ಸಮರ್ಪಿಸುತ್ತಿರುವ ಭಕ್ತಸಮೂಹ, ಒಳಗೆ ಬಿಟ್ಟಾರೆಂಬ ಆಸೆಯಿಂದ ಇನ್ನೊಂದು ಕಿರು ಬಾಗಿಲು ಬಳಿ ಕಾದುನಿಂತ ಭಕ್ತರು, ಭಕ್ತರಿಲ್ಲದೆ ಭಣಗುಡುತ್ತಿದ್ದ ದೇವಾಲಯದ ಪ್ರಾಂಗಣ, ಗರ್ಭಗುಡಿಯಲ್ಲಿನ ದೇವರೊಂದಿಗೆ ಬಂಧಿಯಾಗಿ ಒಳಭಾಗದಲ್ಲಿಯೇ ಸುಮ್ಮನೆ ಕುಳಿತ ದೇವಾಲಯದ ಪೂಜಾರರ ಸಮೂಹ..!

ಈ ಭಾಗದ ಪ್ರಸಿದ್ಧ ಪವಮಾನ ಕ್ಷೇತ್ರವಾದ ತುಳಸಿಗೇರಿಯ ಹನುಮಂತ ದೇವರ ದೇವಸ್ಥಾನದಲ್ಲಿ ಶನಿವಾರ ಕಂಡು ಬಂದ ದೃಶ್ಯಗಳಿವು.
ಕರೊನಾ ವೈರಸ್ ಹಾವಳಿ ಹಿನ್ನೆಲೆ ಜಿಲ್ಲಾಡಳಿತ ನೀಡಿದ ಸೂಚನೆಯಂತೆ ಕಳೆದ ಗುರುವಾರದಿಂದ ದೇವಾಲಯದ ಮಹಾದ್ವಾರವನ್ನು ಬಂದ್ ಮಾಡಿ ದೇಗುಲಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಶನಿವಾರದಂದು ಅಷ್ಟಾಗಿ ಭಕ್ತರು ದೇವಾಲಯದತ್ತ ಸುಳಿಯಲಿಲ್ಲವಾದರೂ, ತಿಳಿದೋ ತಿಳಿಯದೋ ದೇವರ ದರ್ಶನಕ್ಕೆ ಬಂದವರು ಮಾತ್ರ ನಿರಾಸೆಯಿಂದ ಹಿಂತಿರುಗುತ್ತಿರುವುದು ಇಡೀ ದಿನ ಕಂಡು ಬಂತು.

ದರ್ಶನಕ್ಕೆ ಭಕ್ತರ ಪರದಾಟ
ಬೆಳಗ್ಗೆ ಹಾಗೂ ಸಂಜೆ ವೇಳೆಯಲ್ಲಿ ದೇಗುಲದತ್ತ ಭಕ್ತರು ಆಗಮಿಸುವುದು ಕಂಡು ಬಂತು. ಬಂದವರು ಮಹಾದ್ವಾರದಲ್ಲಿಯೇ ದೇವರಿಗೆ ಕೈ ಮುಗಿದು ಭಕ್ತಿ ಸಮರ್ಪಿಸಿದರು. ಇನ್ನೊಂದು ಬದಿಯ ಕಿರು ಬಾಗಿಲು ಬಳಿ ಕೆಲವು ಭಕ್ತರು ನಿಂತು ಒಳಗೆ ಬಿಡುತ್ತಾರೆಂಬ ಆಸೆಯಿಂದ ಕಾಯ್ದರು. ಪ್ರತಿ ಶನಿವಾರ ಅಸಂಖ್ಯಾತ ಭಕ್ತರಿಂದ ತುಂಬಿಕೊಳ್ಳುತ್ತಿದ್ದ ಹನುಮಂತ ದೇವರ ಗುಡಿಯ ಪ್ರಾಂಗಣ ಭಕ್ತರಿಲ್ಲದೆ ಭಣಗುಡುತ್ತಿತ್ತು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net