

ಕಲಾದಗಿ: ಕಳೆದೊಂದು ವಾರದಿಂದ ಸ್ಥಳಿಯ ಠಾಣಾಧಿಕಾರಿ ಸೇರಿದಂತೆ ನಾಲ್ಕು ಜನರ ಮೇಲೆ ಏಕಾಏಕಿ ದಾಳಿಮಾಡಿ ಗಾಯಗೊಳಿಸಿದ್ದ ಮೊಂಡುಬಾಲದ ಮಂಗ ಸೇರಿದಂತೆ ಇನ್ನಿತರ ಏಳು ಮಂಗಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಸೆರೆ ಹಿಡಿದಿದ್ದಾರೆ.
ಗ್ರಾಮದಲ್ಲಿನ ಅಪಾರ ಸಂಖ್ಯೆಯ ಮಂಗಗಳಲ್ಲಿ ಮೊಂಡು ಬಾಲದ ದೊಡ್ಡ ಕರಿಯ ಮಂಗ ಸ್ಥಳೀಯ ಪಿಎಸ್‌ಐ ಚಂದ್ರಶೇಖರ ಹೆರಕಲ್ ಅವರ ಮೇಲೆ ಏಕಾಏಕಿ ಮೇಲೆ ದಾಳಿ ಅವರ ತೊಡೆ ಭಾಗವನ್ನು ಗಾಯಗೊಳಿಸಿತ್ತು. ಓರ್ವ ಬಾಲಕ, ಇಬ್ಬರು ಪುರುಷರು ಹಾಗೂ ಓರ್ವ ಮಹಿಳೆ ಮೇಲೆಯೂ ದಾಳಿ ಮಾಡಿ ಗಾಯಗೊಳಿಸಿತ್ತು.
ಮಂಗಗಳನ್ನು ಹಿಡಿಯುವಲ್ಲಿ ಪರಿಣತರಾದ ಬಾದಾಮಿ ಬಳಿಯ ಚೋಳಚಗುಡ್ಡದ ಈರಯ್ಯ ಗಣಾಚಾರಿ ಅವರನ್ನು ಕರೆಸಲಾಗಿತ್ತು. ಗ್ರಾಮದ ಗುರುಲಿಂಗೇಶ್ವರ ಮಠದ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ದಾಳಿಕೋರ ಮೊಂಡುಬಾಲದ ಮಂಗ ಸೇರಿದಂತೆ ಇನ್ನಿತರ ಏಳು ಮಂಗಗಳನ್ನು ತಮ್ಮ ಬೋನಿನೊಳಗೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಗ್ರಾಪಂ ಅಧ್ಯಕ್ಷೆ ಖಾತುನಬೀ ರೋಣ, ಉಪಾಧ್ಯಕ್ಷ ಪಕೀರಪ್ಪ ಮಾದರ, ಪಿಡಿಒ ಸ್ವಪ್ನಾ ನಾಯಕ ಸಹಯೋಗದಲ್ಲಿ ಅರಣ್ಯ ಇಲಾಖೆಯ ಉಪವಲಯ ಅಧಿಕಾರಿ ರಮೇಶ ಮಠ, ಅರಣ್ಯ ರಕ್ಷಕ ಸಂತೋಷ ನಾಟೇಕರ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದರು.