ಪ್ರೀತಮ ಸ್ಪೋರ್ಟ್ಸ್ ಕ್ಲಬ್‌ಗೆ ಮೊದಲ ಬಹುಮಾನ

KLDG NEWS 20-1
Published on

ಕಲಾದಗಿ: ಬೆಳಗಾವಿ ವಿಭಾಗಮಟ್ಟದ ಪ್ರೊ ಕಬಡ್ಡಿ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ತುಳಸಿಗೇರಿಯ ಪ್ರೀತಮ ಸ್ಪೋರ್ಟ್ಸ್ ಕ್ಲಬ್ ತಂಡ 26 ಸ್ಕೋರ್‌ನೊಂದಿಗೆ ಮೇಲುಗೈ ಸಾಧಿಸಿ 1,11,111 ರೂ. ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು.

ಸಮೀಪದ ತುಳಸಿಗೇರಿಯಲ್ಲಿ ಮೂರು ದಿನದಿಂದ ನಡೆದ ಪಂದ್ಯಾವಳಿಯ ಕೊನೇ ದಿನ ಭಾನುವಾರ ರಾತ್ರಿ ಫೈನಲ್ ಪಂದ್ಯದಲ್ಲಿ ತುಳಸಿಗೇರಿಯ ಪವನಪುತ್ರ ಸ್ಪೋರ್ಟ್ಸ್ ಕ್ಲಬ್‌ನೊಂದಿಗೆ ಸೆಣಸಾಡಿದ ಪ್ರೀತಮ ಸ್ಪೋರ್ಟ್ಸ್ ಕ್ಲಬ್ ಪ್ರಥಮ ಸ್ಥಾನ ಪಡೆಯಿತು.

ದ್ವಿತೀಯ ಸ್ಥಾನ ಪಡೆದ ಪವನಪುತ್ರ ಸ್ಪೋರ್ಟ್ಸ್ ಕ್ಲಬ್‌ಗೆ 77,777 ರೂ. ಬಹುಮಾನ ಹಾಗೂ ಕಪ್, ಶಾರದಾಳದ ಎಸ್‌ಆರ್‌ಎಂ ಸ್ಪೋರ್ಟ್ಸ್ ಕ್ಲಬ್ ತೃತೀಯ ಬಹುಮಾನದೊಂದಿಗೆ 55,555 ರೂ. ಬಹುಮಾನ ಹಾಗೂ ಕಪ್ ಪಡೆಯಿತು. ದೇವನಾಳದ ರೆಡ್ಡಿ ಬುಲ್ಸ್ ಚತುರ್ಥ ಬಹುಮಾನ 33,333 ರೂ. ಹಾಗೂ ಕಪ್ ತನ್ನದಾಗಿಸಿಕೊಂಡಿತು. ಪ್ರೀತಮ ಸ್ಪೋರ್ಟ್ಸ್ ಕ್ಲಬ್‌ನ ಹಳ್ಳಪ್ಪ ಬೆಸ್ಟ್ ರೈಡರ್, ಪವನಪುತ್ರ ತಂಡದ ಮಲ್ಲಿಕಾರ್ಜುನ ಬೆಸ್ಟ್ ಕ್ಯಾಚರ್ ಪದಕ ಪಡೆದರು.

ಕಿಕ್ಕಿರಿದ ಜಸನಸ್ತೋಮ: ಪಂದ್ಯಾವಳಿಯ 3 ದಿನ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ನಡೆಯುತ್ತಿದ್ದ ಆಟವನ್ನು ಪ್ರೇಕ್ಷಕರು ಹುಮ್ಮಸ್ಸಿನಿಂದ ವೀಕ್ಷಿಸಿದರು. ಭಾನುವಾರ ನಡೆದ ಅಂತಿಮ ಹಣಾಹಣಿ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಕಿಕ್ಕಿರಿದು ಮೈದಾನದಲ್ಲಿ ಸೇರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net