

ಕಾರಟಗಿ: ಪಟ್ಟಣದ ಆರಾಧ್ಯದೈವ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಮಹಾಮಂಗಲೋತ್ಸವ ಹಾಗೂ 25ನೇ ವರ್ಷದ ಜೋಡು ರಥೋತ್ಸವ ಪ್ರಯುಕ್ತ ಗಂಗೆಸ್ಥಳ ಮೆರವಣಿಗೆಯಲ್ಲಿ ಪಲ್ಲಕ್ಕಿ ಉತ್ಸವ ಭಾನುವಾರ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ವೀರಭದ್ರೇಶ್ವರ ಹಾಗೂ ಶರಣಬಸವೇಶ್ವರರ ಮೂರ್ತಿಗೆ ಮಹಾರುದ್ರಾಭಿಷೇಕ, ವಿಶೇಷ ಅಲಂಕಾರ, ನೈವೇದ್ಯ ಅರ್ಪಿಸಲಾಯಿತು. ಬಳಿಕ ಸಕಲ ಮಂಗಳ ವಾದ್ಯ, ನಂದಿಕೋಲು, ಡೊಳ್ಳು, ಝಾಂಜ್ ಮೇಳ, ಮಹಿಳೆಯರ ಕುಂಭ-ಕಳಸ ಹಾಗೂ ಪುರವಂತರೊಂದಿಗೆ ಗಂಗೆಸ್ಥಳ ಮೆರವಣಿಗೆ ನಡೆಸಲಾಯಿತು.
ತುಂಗಭದ್ರ ಎಡದಂಡೆಯ 31ನೇ ವಿತರಣಾ ಕಾಲುವೆಯಿಂದ ಬೆಳಗ್ಗೆ 7ಗಂಟೆಗೆ ಆರಂಭಗೊಂಡ ಗಂಗೆಸ್ಥಳ ಮೆರವಣಿಗೆ ಸಾವಿರಾರು ಭಕ್ತಸಮೂಹದೊಂದಿಗೆ ಆರ್‌ಜಿ ರಾಜ್ಯಹೆದ್ದಾರಿ, ಕನಕದಾಸ ವೃತ್ತ, ಸಾಲೋಣಿ ವೃತ್ತ, ಹಳೇ ಬಸ್‌ನಿಲ್ದಾಣ, ಡಾ.ರಾಜ್ ಕಲಾಮಂದಿರ, ಹಳೇ ಬಜಾರ್ ಮೂಲಕ ಮಧ್ಯಾಹ್ನ 2 ಗಂಟೆಗೆ ಮರಳಿ ದೇವಸ್ಥಾನಕ್ಕೆ ತಲುಪಿತು. ಸಾವಿರಾರು ಯುವಕರು ಮೆರವಣಿಗೆಯುದ್ದಕ್ಕೂ ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದರು. ಮಹಿಳೆಯರ ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾಪ್ರಕಾರಗಳು ಜನಮನಸೊರೆಗೊಂಡವು.
ಮೆರವಣಿಗೆಯಲ್ಲಿ ಕನ್ನಡ ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಅನೇಕ ರಾಜಕೀಯ ನಾಯಕರು ಪಾಲ್ಗೊಂಡಿದ್ದರು. ಬೇವಿನಾಳ, ನಾಗನಕಲ್, ಮೈಲಾಪುರ, ಗುಡೂರು, ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ, ಯರಡೋಣಾ, ಚಳ್ಳೂರು ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳ ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ಹರಸಾಹಸ: ಗಂಗೆಸ್ಥಳ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರಿಂದ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು. ಆರ್ ಜಿ ರಾಜ್ಯಹೆದ್ದಾರಿ ಮೂಲಕ ಮೆರವಣಿಗೆ ಸಾಗುವುದರಿಂದ ಸುಗುಮ ಸಂಚಾರದ ವ್ಯವಸ್ಥೆ ಕಲ್ಪುಸಲು ಪೊಲೀಸ್ ಸಿಬ್ಬಂದಿ ಹರಸಾಹಸಪಟ್ಟರು. ನೀರು ಪೂರೈಕೆ ಹಾಗೂ ಸ್ವಚ್ಛತೆಗೆ ಪುರಸಭೆ ಸಿಬ್ಬಂದಿ ಶ್ರಮಿಸಿದರು.