ಕಲಬುರಗಿ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ಕೈ ದಳ ಪಾಲು : ಮುದುಡಿದ ಕಮಲ

IMG-20230824-WA0031
Published on

ಮಹಾನಗರ ಪಾಲಿಕೆಯ ೪ ಸಮಿತಿಗಳಿಗೆ ಅವಿರೋಧವಾಗಿ ಅಧ್ಯಕ್ಷರ ಆಯ್ಕೆ | ಕಲಬುರಗಿಯಲ್ಲಿ ಕಾಂಗ್ರೆಸ್ ಜೆಡಿಎಸ್ ದೋಸ್ತಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಿರೀಕ್ಷೆಯಂತೆ ಕಲಬುರಗಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಧಿಕಾರ ಹಂಚಿಕೆ ಮೈತ್ರಿ ವರ್ಕೌಟ್ ಆಗಿದೆ. ಗುರುವಾರ ಜರುಗಿದ ಚುನಾವಣೆಯಲ್ಲಿ  ಉಭಯ ಪಕ್ಷಗಳ ನಾಲ್ವರು ಸದಸ್ಯರು ತಲಾ ಎರಡು ಸ್ಥಾಯಿ ಸಮಿತಿಗೆ ಅಧ್ಯಕ್ಷರಾಗಿ ಅವಿರೋಧವಾಗಿ  ಆಯ್ಕೆಯಾದರು. ವಿಧಾನ ಸೌಧದಲ್ಲಿ ಜೆಡಿಎಸ್-ಕಾಂಗ್ರೆಸ್ ಕುಸ್ತಿ ನಡೆದರೆ, ತೊಗರಿ ನಾಡಿನಲ್ಲಿ ದೋಸ್ತಿಯಾಗಿದೆ. ಈ ಮೂಲಕ ಬಿಜೆಪಿಯನ್ನು ಸ್ಥಾಯಿ ಸಮಿತಿ ಅಧ್ಯಕ್ಷಗಿರಿಯಿಂದ ದೂರವಿಸುವಲ್ಲಿ ಸಫಲರಾದರು.
ಪಾಲಿಕೆಯಲ್ಲಿ ಬಿಜೆಪಿಯೇ ಆಡಳಿತ ಪಕ್ಷವಾಗಿದೆ. ಆ ಪಕ್ಷದವರೆ ಮೇಯರ್ ಮತ್ತು ಉಪ ಮೇಯರ್ ಇದ್ದರೂ ಸಹ ನಾಲ್ಕು ಸ್ಥಾಯಿ ಸಮಿತಿಗಳು ಕಮಲ ಪಡೆಯಿಂದ ಜಾರಿದವು. ಕಲಬುರಗಿಯಲ್ಲಿ ಕಮಲ ಮುದುಡಿದರೆ ಕೈ ಮತ್ತು ತೆನೆ ಹೊತ್ತ ಮಹಿಳೆ ಕಿಲಕಿಲ ಎಂದವು.    ಈ ಬೆಳವಣಿಗೆ ನೋಡಿದರೆ ಮುಂದಿನ ಮೇಯರ್ ಚುನಾವಣೆಯಲ್ಲಿ ಈ ದೋಸ್ತಿ ಮುಂದುವರೆಯುವAತಿದೆ. ಎರಡನೇ ಅವಧಿಗೆ ಮತ್ತೇ ಬಿಜೆಪಿ ಮೇಯರ್ ಆಗುವುದು ಡೌಟ್.
 ನಗರದ ಇಂದಿರಾ ಸ್ಮಾರಕ ಭವನ ಟೌನ್ ಹಾಲ್‌ದಲ್ಲಿ ಮಹಾಪೌರ ವಿಶಾಲ ದರ್ಗಿ ಅಧ್ಯಕ್ಷತೆಯಲ್ಲಿ ಗುರುವಾರ ಜರುಗಿದ ಪಾಲಿಕೆಯ ೨೧ನೇ ಅವಧಿಯ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆಯನ್ನು ಪ್ರಕಟಿಸಿ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಿದರು. ಸ್ಥಾಯಿ ಸಮಿತಿಗೆ ಹಿಂದೆ ಆಯ್ಕೆಯಾಗಿದ್ದ ೨೮ ಸದಸ್ಯರ ಪೈಕಿ ವಾರ್ಡ್ ಸಂಖ್ಯೆ ೬ರ ಸದಸ್ಯೆ ಅರುಣಾಬಾಯಿ ಅಂಬರಾಯ ಮತ್ತು ವಾರ್ಡ್ ಸಂಖ್ಯೆ ೩೭ರ ಸದಸ್ಯೆ ರೇಣುಕಾ ರಾಮರೆಡ್ಡಿ  ಗೈರಾಗಿದ್ದರು.
ಕರ, ಹಣಕಾಸು ಹಾಗೂ ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಾರ್ಡ್ ಸಂಖ್ಯೆ ೩೩ರ ಕಾಂಗ್ರೆಸ್ ಸದಸ್ಯೆ ರಾಗಮ್ಮ ಎಸ್. ಇನಾಮದಾರ, ಸಾರ್ವಜನಿಕ ಅರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗ್ಕಿ ವಾರ್ಡ್ ಸಂಖ್ಯೆ ೩೪ರ ಜೆಡಿಎಸ್ ಸದಸ್ಯ ವಿಶಾಲ್ ನವರಂಗ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ವಾರ್ಡ್ ಸಂಖ್ಯೆ ೪ರ ಕಾಂಗ್ರೆಸ್ ಸದಸ್ಯ ರಿಯಾಜ್ ಅಹ್ಮದ್ ಸಿದ್ದಿಕಿ ಶಾರಿಪುರ್ ಹಾಗೂ ಲೆಕ್ಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಜೆಡಿಎಸ್ ಸದಸ್ಯ ಸಾಜಿದ್ ಕಲ್ಯಾಣಿ ಆಯ್ಕೆಯಾದರು.  
ಈ ಸ್ಥಾಯಿ ಸಮಿತಿಗಳಿಗೆ ತಲಾ ಒಬ್ಬೊಬ್ಬರೇ ಅಭ್ಯರ್ಥಿ ನಾಮಪತ್ರ ಸಲ್ಲಿಸಿದರು. ಸಮಯ ಮುಗಿದ ಬಳಿಕ  ಉಮೇದುವಾರಿಕೆ ಪರಿಶೀಲಿಸಿದಾಗ ಎಲ್ಲವೂ ಕ್ರಮ ಬದ್ಧವಾಗಿದ್ದವು. ಹೀಗಾಗಿ ನಾಲ್ವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ಧಾರೆ ಎಂದು ಮಹಾಪೌರ ವಿಶಾಲ ದರ್ಗಿ ಪ್ರಕಟಿಸಿದರು. ನೂತನ ಅಧ್ಯಕ್ಷರಿಗೆ  ಉತ್ತರ ಶಾಸಕಿ ಕನ್ನಿಜ್ ಫಾತಿಮಾ ಇಸ್ಲಾಂ, ಮೇಯರ್ ವಿಶಾಲ್ ದರ್ಗಿ, ಉಪ ಮೇಯರ್ ಶಿವಾನಂದ ಪಿಸ್ತಿ ಅವರು ಹೂ-ಗುಚ್ಛ ನೀಡಿ ಶುಭ ಕೋರಿದರು.
ಕಳೆದ ೭ ರಂದು ನಾಲ್ಕು ಸ್ಥಾಯಿ ಸಮಿತಿಗಳಿಗೆ  ತಲಾ ೭ ಸದಸ್ಯರ ಆಯ್ಕೆಯ ಚುನಾವಣೆಯು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ  ನೇತೃತ್ವದಲ್ಲಿ ಜರುಗಿತ್ತು. ಆಗ ಎಲ್ಲರು ಅವಿರೋಧವಾಗಿ ಚುನಾಯಿತರಾಗಿದ್ದರು. ಹೀಗಾಗಿ ಗುರುವಾರ ಕೇವಲ ಆಯಾ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಾತ್ರ ಜರುಗಿತು.
ಮಹಾನಗರ ಪಾಲಿಕೆಯ  ಆಯುಕ್ತ ಭುವನೇಶ ಪಾಟೀಲ್, ಉಪ ಆಯುಕ್ತರಾದ ಪ್ರಕಾಶ ರಜಪೂತ, ಆರ್.ಪಿ.ಜಾಧವ, ಪರಿಷತ್ ಕಾರ್ಯದರ್ಶಿ ಸಾವಿತ್ರಿ ಸಲಗರ, ಅಧಿಕಾರಿಗಳಾದ  ಶ್ರೀಯಾಂಕಾ ಧನಶ್ರೀ, ಶಿವಣ್ಣಗೌಡ ಪಾಟೀಲ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net