ನೀರಿಗಾಗಿ ಯಳಸಂಗಿ ಗ್ರಾಮಸ್ಥರ ಪ್ರತಿಭಟನೆ

ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಯಳಸಂಗಿ ಗ್ರಾಮದ ವಿವೇಕಾನಂದ ಕ್ರಾಸ್​ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.
ಸಮರ್ಪಕ ಕುಡಿಯುವ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ ಯಳಸಂಗಿ ಗ್ರಾಮದ ವಿವೇಕಾನಂದ ಕ್ರಾಸ್​ ಮುಖ್ಯ ರಸ್ತೆಯಲ್ಲಿ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು.
Published on: 

ಆಳಂದ: ಗ್ರಾಮದಲ್ಲಿ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮೌಖಿಕ ಹಾಗೂ ಲಿಖಿತ ಮನವಿ ಸಲ್ಲಿಸಿದರೂ ಸ್ಪಂದನೆ ದೊರೆಯದ ಹಿನ್ನೆಲೆ ಆಕ್ರೋಶಗೊಂಡ ಯಳಸಂಗಿ ಗ್ರಾಮಸ್ಥರು ಸೋಮವಾರ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ನಿಂರ್ಬಗಾ&ನಿಂಬಾಳ ಹಾಗೂ ಯಳಸಂಗಿ&ಆಳಂದ ಮಾರ್ಗದ ಸ್ವಾಮಿ ವಿವೇಕಾನಂದ ಕ್ರಾಸ್​ ಬಳಿ ಬೆಳಗ್ಗೆ 6ರಿಂದ ಸಂಜೆ 4ರವರೆಗೆ ಮಹಿಳೆಯರು ಹಾಗೂ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಕುಳಿತು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.

ಮಧ್ಯಾಹ್ನ 2ರ ಸುಮಾರಿಗೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ನೋಡಲ್​ ಅಧಿಕಾರಿ ಡಾ.ಯಲ್ಲಪ್ಪ ಇಂಗಳೆ ಹಾಗೂ ಗ್ರಾಪಂ ಪಿಡಿಒ ಶಿವಾನಂದ ಹಡಪದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಸಮಸ್ಯೆ ಶ್ರೀ ಪರಿಹರಿಸುವುದಾಗಿ ಭರವಸೆ ನೀಡಿದರು. ಮೊದಲು ನೀರು ಕೊಡಿ, ಆಮೇಲೆ ಮಾತನಾಡಿ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಬಳಿಕ ಅಧಿಕಾರಿಗಳು ಗ್ರಾಮದಲ್ಲಿರುವ ಐದು ಕೊಳವೆಬಾವಿಗಳ ಸ್ವಚ್ಛತೆ, ಹೊಸ ಪೈಪ್​ಲೈನ್​ ಅಳವಡಿಕೆ, ಹಳೆಯ ಪೈಪ್​ಲೈನ್​ ದುರಸ್ತಿ, ಹಡಲಗಿ ಭಾವಿಯ ಪಂಪ್​ಸೆಟ್​ಗೆ ಕೇಬಲ್​ ಅಳವಡಿಕೆ ಹಾಗೂ ತಾಂಡಾ ಸಮೀಪದ ಎರಡು ಕೊಳವೆಬಾವಿಗಳ ಸ್ವಚ್ಛತೆ ಮತ್ತು ಪೈಪ್​ಲೈನ್​ ಕಾಮಗಾರಿ ಕೈಗೊಳ್ಳುವಂತೆ ಸೂಚಿಸಿದರು. ಅನಧಿಕೃತ ನಳ ಸಂಪರ್ಕಗಳನ್ನು ಕಡಿತಗೊಳಿಸುವಂತೆಯೂ ನಿರ್ದೇಶನ ನೀಡಿದರು.

ಪ್ರಮುಖರಾದ ಭೀಮಣ್ಣ ಎಂ. ಶಿವಪೂರೆ, ಸಾತಲಿಂಗಯ್ಯ ಮಠಪತಿ, ವಿಜಯಕುಮಾರ ಮೇತ್ರೆ, ರಾಜಶೇಖರ ಸಾವಳೆ, ಮಂಜುನಾಥ ಅಕ್ಕಲಕೋಟ, ಶರೀಪಾ ನದಾಫ್​, ಕಲ್ಲವ್ವ ಬಸಗೊಂಡ, ಲ್ಮಬಾಯಿ ಅವಟೆ, ಅಂಬಿಕಾ ಕಲಾಲ್​, ಜುಬಾ ಗೊಲ್ಲರ, ಮಹಾದೇವಿ ಅಕ್ಕಲಕೋಟ ಇತರರಿದ್ದರು.

ರಸ್ತೆ ತಡೆ ಪ್ರತಿಭಟನೆಯಿಂದ ಆಳಂದ, ನಿಂಬಾಳ, ಮಾದನಹಿಪ್ಪರಗಾ, ನಿಂರ್ಬಗಾ ಹಾಗೂ ಕಲಬುರಗಿ ಮಾರ್ಗದ ಬಸ್​ ಸಂಚಾರಕ್ಕೆ ಅಡ್ಡಿಯಾಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ಸಂಜೆ 4ಕ್ಕೆ ಪ್ರತಿಭಟನೆ ಹಿಂಪಡೆಯಲಾಯಿತು. ಪಿಎಸ್​ಐ ರೇಣುಕಾ ಉಡಗಿ ಹಾಗೂ ಸಿಬ್ಬಂದಿ ಬಂದೋಬಸ್ತ್​ ಕಲ್ಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net