

ಚಿತ್ತಾಪುರ: ಈಗಾಗಲೇ ಬರ ಘೋಷಣೆ ಮಾಡಿದ್ದು, ಕೂಡಲೇ ರೈತರ ಸಾಲ ಮನ್ನಾ, ಬೆಳೆ ಹಾನಿಯಾದ ಪರಿಹಾರ ನೀಡಬೇಕು. ಜಾನುವಾರುಗಳಿಗೆ ಮೇವು, ನೀರು ಕಲ್ಪಿಸುವ ಕೆಲಸ ಆಗಬೇಕು ಎಂದು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ ಆಗ್ರಹಿಸಿದರು. ಕೃಷಿಕ ಸಮಾಜದ ಪದಾಧಿಕಾರಿಗಳ ನೇತೃತ್ವದಲ್ಲಿ ಗ್ರೇಡ್-2 ತಹಸೀಲ್ದಾರ್ ರಾಜಕುಮಾರ ಮರತೂರ ಅವರಿಗೆ ಬುಧವಾರ ನಾಮಪತ್ರ ಸಲ್ಲಿಸಿ, ಮಳೆ ಅಭಾವದಿಂದ ತಾಲೂಕಿನಲ್ಲಿ ಬರ ಆವರಿಸಿದ್ದು, ಬೆಳೆ ಕಳೆದುಕೊಂಡು ರೈತರು ಸಂಕಷ್ಟದಲ್ಲಿದ್ದಾರೆ. ಜನ-ಜಾನು ವಾರುಗಳಿಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ. ಹೀಗಾಗಿ ಸರ್ಕಾರ ತಕ್ಷಣ ಕ್ರಮ ಕೈಗೊಂಡು ರೈತರ ನೆರವಿಗೆ ಧಾವಿಸಬೇಕು ಎಂದು ಮನವಿ ಮಾಡಿದರು. ಬೆಳೆ ವಿಮೆ ಮಾಡಿಸಿರುವ ತಾಲೂಕಿನ ಎಲ್ಲ ರೈತರಿಗೆ ಮಧ್ಯಂತರ ವಿಮೆ ಪರಿಹಾರ ಒದಗಿಸಬೇಕು. ರೈತರ ಕೃಷಿ ಪಂಪ್ಸೆಟ್ಗಳಿಗೆ ಕನಿಷ್ಠ 7 ಗಂಟೆ 3 ಫೇಸ್ ವಿದ್ಯುತ್ ನೀಡಬೇಕು. ರೈತರು ವಾಣಿಜ್ಯ ಬ್ಯಾಂಕ್ ಮತ್ತು ಸಹಕಾರ ಬ್ಯಾಂಕ್ಗಳಲ್ಲಿ ಪಡೆದಿರುವ ಬೆಳೆ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ, ತಾಲೂಕು ಪದಾಧಿಕಾರಿಗಳಾದ ನಿಂಗಣ್ಣ ಹೇಗಲೇರಿ, ಬಾಬು ಕಾಶಿ, ಚನ್ನಬಸಪ್ಪ ಬಂಡಪ್ಪ, ನಿಂಗಣ್ಣಗೌಡ, ಮಲ್ಲಿಕಾರ್ಜುನ, ಒಕ್ಕಲುತನ ಹುಟ್ಟುವಳಿ ಮಾರಾಟ ಸಹಾಕಾರ ಸಂಘದ ಅಧ್ಯಕ್ಷ ದೇವಿಂದ್ರ ಅರಣಕಲ್ ಇತರರಿದ್ದರು.