

ಚಿತ್ತಾಪುರ: ರಾಷ್ಟ್ರಕೂಟರ ಕುಲದೇವತೆ, ಮಹಾನ್ ಶಕ್ತಿ ದೇವತೆ ಶ್ರೀ ನಾಗಾವಿ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ ಲಕ್ಷಾಂತರ ಭಕ್ತರ ಜೈೂಷದ ಮಧ್ಯೆ ಸಂಭ್ರಮದಿಂದ ಸೋಮವಾರ ಜರುಗಿತು.
ಬೆಳಗ್ಗೆ ದೇವಿಗೆ ವಿಶೇಷ ಅಲಂಕಾರ, ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದವು. ಮಧ್ಯಾಹ್ನ ಸರಾಫ್ ಲಚ್ಚಪ್ಪ ನಾಯಕ್ ನಿವಾಸದಲ್ಲಿ ತಹಸೀಲ್ದಾರ್ ನಾಗಯ್ಯ ಹಿರೇಮಠ, ಧರ್ಮದರ್ಶಿ ರತ್ನಾಕರ ನಾಯಕ್ ಹಾಗೂ ಇತರರು ವ್ನಿಶ್ವೆರ, ಗುರು ಹಾಗೂ ದೇವಿ ಪಲ್ಲಕ್ಕಿ ಪೂಜೆ ಸಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು.
ಲಚ್ಚಪ್ಪ ನಾಯಕ್ ಅವರ ಮನೆಯಿಂದ ಆರಂಭಗೊಂಡ ಪಲ್ಲಕ್ಕಿ ಉತ್ಸವ ಚಿತ್ತಾವಲಿ ಚೌಕ್, ಕಪಡಾ, ಕಿರಾಣಾ ಬಜಾರ್, ಜನತಾ ಚೌಕ್, ನಾಗಾವಿ ಚೌಕ್, ಒಂಟಿ ಕಮಾನ್ ಸೇರಿ ಪ್ರಮುಖ ಬೀದಿಗಳ ಮೂಲಕ ರಾತ್ರಿ ನಾಗಾವಿ ಯಲ್ಲಮ್ಮ ದೇವಸ್ಥಾನ ತಲುಪಿತು. ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಲೇಜಿಮ್, ಕೋಲಾಟ, ಯುವಕರ ಕುಣಿತ, ಬಣ್ಣ& ಬಣ್ಣದ ಕೊಡೆ, ಧ್ವಜಗಳು ಗಮನಸೆಳೆದವು. ಸುಮಂಗಲೆಯರು ಕಳಸ, ಕುಂಭ ಹೊತ್ತು ಸಾಗಿದರು. ಸುಮಾರು 8 ತಾಸು ದೇವಿಯ ಪಲ್ಲಕ್ಕಿ ಮೆರವಣಿಗೆ ಜರುಗಿತು. ಗರ್ಭಗುಡಿಗೆ 5 ಪ್ರದಕ್ಷಣೆ ಹಾಕುವ ಮೂಲಕ ಉತ್ಸವಕ್ಕೆ ತೆರೆಬಿದ್ದಿತು.
ಬೆಳಗ್ಗೆಯಿಂದಲೇ ಕರ್ನಾಟಕ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ನಾನಾ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದವರು. ಕೆಲವರಂತೂ ದೇಗುಲದ ಅಕ್ಕ&ಪಕ್ಕದ ಜಮೀನುಗಳಲ್ಲಿ ವಿಶೇಷ ಆಹಾರ ತಯಾರಿಸಿ ತಾಯಿಗೆ ನೈವೇದ್ಯ ಅರ್ಪಿಸಿದರು. ಬಣ್ಣ&ಬಣ್ಣದ ವಿದ್ಯುತ್ ದೀಪಾಲಂಕಾರದಿಂದ ದೇಗುಲ ಝಗಮಗಿಸುತ್ತಿತ್ತು.
ಡಿವೈಎಸ್ಪಿ ಶಂಕರಗೌಡ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಭಾರತಿ ದಂಡೋತಿ, ಪ್ರಮುಖರಾದ ಗೌತಮ ನಾಯಕ್, ಕೃಷ್ಣಾ ನಾಯಕ್, ಕಣ್ವಾ ನಾಯಕ್, ಜೀವನರಾವ ನಾಯಕ್, ಭೀಮಣ್ಣ ಸಾಲಿ, ಚಂದ್ರಶೇಖರ ಅವಂಟಿ, ನಾಗರಾಜ ರೇಷ್ಮಿ, ಸುರೇಶ ಅಳ್ಳೊಳ್ಳಿ, ಈರಪ್ಪ ಬೋಯಿ, ತಿರುಪತಿ ಚವ್ಹಾಣ್, ಪ್ರಸಾದ ಅವಂಟಿ, ನಾಗರೆಡ್ಡಿ ಗೊಪಶೇನ, ನರಹರಿ ಕುಲಕರ್ಣಿ, ಮಲ್ಲಿಕಾರ್ಜುನರೆಡ್ಡಿ ಇಜಾರ, ಜಗದೀಶ ಚವ್ಹಾಣ್, ನಾಗರಾಜ ಸುಲ್ತಾನಪುರ, ಗುರುರಾಜ ಹೂಗಾರ, ನಾಗರಾಜ ಹೂಗಾರ, ಚಂದ್ರು ಕಾಳಗಿ ಇತರರಿದ್ದರು.
ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ದೇವಸ್ಥಾನ ಸಮಿತಿ ಹಾಗೂ ಪುರಸಭೆ ಸ್ಥಳಿಯ ಆಡಳಿತ ಮುತುವರ್ಜಿ ವಹಿಸಿತ್ತು. ಪುರಸಭೆಯಿಂದ ಸ್ವಚ್ಛ ಚಿತ್ತಾಪುರ ನಿರ್ಮಿಸಲು ಹಲವು ಕ್ರಮ ಕೈಗೊಳ್ಳಲಾಗಿತ್ತು. ಮೆರವಣಿಗೆಯ ಮಾರ್ಗದುದ್ದಕ್ಕೂ ಕಸದ ತೊಟ್ಟಿಗಳನ್ನು ಇಡಲಾಗಿತ್ತು. ವಿದ್ಯುತ್ ದೀಪ ಅಳವಡಿಸಲಾಗಿತ್ತು. ಅಲ್ಲದೆ ಅಲ್ಲಲ್ಲಿ ಮೊಬೈಲ್ ಶೌಚಗೃಹ ನಿರ್ಮಾಣ ಮಾಡಿ, ಅನುಕೂಲ ಕಲ್ಪಿಸಲಾಗಿತ್ತು.
ಉತ್ಸವದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದರಿಂದ ಯಾವುದೇ ಅಹಿತಕರ ಟನೆ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿತ್ತು. ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ಎಸ್.ಸಿ.ಪಾಟೀಲ್, ಪಿಎಸ್ಐ ಮಂಜುನಾಥರೆಡ್ಡಿ ನೇತೃತ್ವದಲ್ಲಿ ಆರಕ್ಷರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ದೇವಸ್ಥಾನ ಪ್ರಾಂಗಣದಲ್ಲಿ ಭಕ್ತರ ಜನಜಂಗುಳಿ ಆಗದಂತೆ ನಿಗಾ ವಹಿಸಲಾಗಿತ್ತು. ಅಲ್ಲದೆ ವಾಹನಗಳ ಪಾರ್ಕಿಂಗ್ಗೆ ಅಚ್ಚುಕಟ್ಟು ವ್ಯವಸ್ಥೆ ಮಾಡಲಾಗಿತ್ತು. ಪೊಲೀಸರ ಜತೆಗೆ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಸ್ವಯಂ ಸೇವಕರಾಗಿ ಸೇವೆ ಸಲ್ಲಿಸಿದರು.
ದೂರದ ಊರುಗಳಿಂದ ಜಾತ್ರೆಗೆ ಆಗಮಿಸಿದ ಭಕ್ತರಿಗಾಗಿ ದೇವಸ್ಥಾನದ ರಸ್ತೆಯುದ್ದಕ್ಕೂ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಸ್ ನಿಲ್ದಾಣದಿಂದ ಭುವನೇಶ್ವರಿ ವೃತ್ತ, ನಾಗಾವಿ ವೃತದಿಂದ ನಾಗಾವಿ ದೇವಸ್ಥಾನದವರೆಗೂ ಸುಮಾರು 80ಕ್ಕೂ ಹೆಚ್ಚು ಕಡೆ ಅನ್ನದಾಸೋಹ ಮಾಡಲಾಗಿತ್ತು. ಯುವಕರು, ಸಂ&ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಹಲವರು ಪೆಂಡಾಲ್ ಅಳವಡಿಸಿ ಪ್ರಸಾದ ನೀಡಿದರು. ಅನ್ನ, ಜೀರಾ ರೈಸ್, ಪಲಾವ್, ಸಜ್ಜಕ, ಸೀರಾ, ಉಪ್ಪಿಟ್ಟು, ಮಿರ್ಚಿ ಬಜ್ಜಿ, ಬಾಳೆಹಣ್ಣು, ಸೇಬು, ಕುಡಿಯುವ ನೀರನ್ನು ಕೊಡಲಾಯಿತು.