

ಯಡ್ರಾಮಿ: ಕ್ಷೇತ್ರದ ಜನರ ಪ್ರಾರ್ಥನೆ ಮತ್ತು ಆಶೀರ್ವಾದದಿಂದ ಸಚಿವ ಸ್ಥಾನ ದೊರೆತಿದ್ದು, ಸ್ವ ಕ್ಷೇತ್ರದ ಅಭಿವೃದ್ಧಿಯೇ ಪ್ರಥಮ ಆದ್ಯತೆಯಾಗಿದೆ ಎಂದು ಸಣ್ಣ ನೀರಾವರಿ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯಸಿಂಗ್ ಹೇಳಿದರು.
ಕಲ್ಯಾಣಿ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಆಯೋಜಿಸಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, ದಿ.ಧರ್ಮಸಿಂಗ್ ಮುಖ್ಯಮಂತ್ರಿಯಾದ ಬಳಿಕ ತಾಲೂಕಿಗೆ ದೊಡ್ಡ ಹುದ್ದೆ ಅಥವಾ ಜವಾಬ್ದಾರಿ ದೊರಕಿರಲಿಲ್ಲ. ಅವರ ಆಶೀರ್ವಾದದಿಂದ 20 ವರ್ಷದ ಬಳಿಕ ನನಗೆ ಸಚಿವ ಸ್ಥಾನ ದೊರೆತಿದೆ. ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವುದರ ಜತೆಗೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಮಳೆ ಅಭಾವದಿಂದ ರೈತರು ಸಂಕಷ್ಟದಲ್ಲಿದ್ದಾರೆ. ತಂದೆ ಪುಣ್ಯಸ್ಮರಣೆ ನಿಮಿತ್ತ ಸಾಮೂಹಿಕ ವಿವಾಹ ಇತರ ಯೋಜನೆ ಹಾಕಿಕೊಂಡಿದ್ದು, ನೀತಿ ಸಂಹಿತೆ ಮುಗಿದ ಬಳಿಕ ಅಗತ್ಯ ಮಾಹಿತಿ ನೀಡುವುದಾಗಿ ತಿಳಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹಲಕರ್ಟಿ, ಯಡ್ರಾಮಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರುಕುಂ ಪಟೇಲ್ ಇಜೇರಿ, ಜಿಪಂ ಮಾಜಿ ಸದಸ್ಯ ಶಾಂತಪ್ಪ ಕೂಡಲಗಿ, ಪ್ರಮುಖರಾದ ರಾಜಶೇಖರ ಸೀರಿ, ಚಂದ್ರಶೇಖರ ಪುರಾಣಿಕ, ಮಲ್ಹಾರರಾವ್ ಕುಲಕರ್ಣಿ, ಹಯ್ಯಾಳಪ್ಪ ಗಂಗಾಕರ, ಶೇಖ್ ಫರೀದ್ ಮಳ್ಳಿಕರ್, ನಾಗಣ್ಣ ಹಾಗರಗುಂಡಗಿ, ಮಹಿಬೂಬ್ ಪಟೇಲ್ ಚಿಂಚೋಳಿ, ಬಸವರಾಜ ಪವಾರ್, ಗುರಣ್ಣ ದೊಡಮನಿ, ರೇವಣಸಿದ್ದ ಬೆಲ್ಲದ, ರಜಾಕ್ ಮನಿಯಾರ್, ಮಹೇಂದ್ರ ಬಾಲೂರ, ಕಾವೇರಿ ಮಾಲಿಪಾಟೀಲ್ ಇತರರಿದ್ದರು.