‘ಅವಳೇ ಬೇಕು’ ಟವರ್ ಮೇಲೆ ಹಠ ಹಿಡಿದ ಯುವಕ!

ಮಾಡಿಯಾಳ ಗ್ರಾಮದಲ್ಲಿ ಪ್ರೀತಿಗಾಗಿ ಹುಡುಗನ ಹಠ
ಮಾಡಿಯಾಳದಲ್ಲಿ ತಾನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಸಬೇಕು ಎಂದು ಹಠ ಹಿಡಿದು ಟವರ್ ಹತ್ತಿ ಕುಳಿತಿರುವ ಯುವಕ ಮಹೇಶ ಭಜಂತ್ರಿ.
ಮಾಡಿಯಾಳದಲ್ಲಿ ತಾನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಮಾಡಿಸಬೇಕು ಎಂದು ಹಠ ಹಿಡಿದು ಟವರ್ ಹತ್ತಿ ಕುಳಿತಿರುವ ಯುವಕ ಮಹೇಶ ಭಜಂತ್ರಿ.
Published on: 

ವಿಜಯವಾಣಿ ಸುದ್ದಿಜಾಲ ನಿಂಬರ್ಗಾ

ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು. ಇಲ್ಲವಾದರೆ ಟವರ್‌ನಿಂದ ಕೆಳಗೆ ಬೀಳುವುದಾಗಿ ಬೆದರಿಸಿ ಯುವಕನೊಬ್ಬ ಮೊಬೈಲ್ ಟವರ್ ಏರಿ ಕುಳಿತ ಘಟನೆ ನಿಂಬರ್ಗಾ ಸಮೀಪದ ಮಾಡಿಯಾಳ ಗ್ರಾಮದಲ್ಲಿ ಶನಿವಾರ ನಡೆದಿದೆ.


ಶಾಹಬಾದ್ ತಾಲೂಕಿನ ತೊನ್ನಸಳ್ಳಿ ಗ್ರಾಮದ ಮಹೇಶ ತಂದೆ ಮಲ್ಲಪ್ಪ ಭಜಂತ್ರಿ ಟವರ್ ಏರಿದ ಯುವಕ. ತನ್ನ ತಾಯಿಯ ತವರೂರು ಮಾಡಿಯಾಳ ಗ್ರಾಮಕ್ಕೆ ಶುಕ್ರವಾರ ಬಂದಿದ್ದ ಮಹೇಶ, ತನ್ನ ಪ್ರೀತಿಯ ವಿಚಾರವನ್ನು ತಾಯಿಯ ಸಹೋದರರಾದ ರಾಮು ಭಜಂತ್ರಿ ಹಾಗೂ ಭೀಮಾಶಂಕರ ಭಜಂತ್ರಿ ಅವರ ಬಳಿ ಹೇಳಿಕೊಂಡಿದ್ದಾನೆ. ಈ ವೇಳೆ ಅವರು ಮುಂದೆ ನೋಡೋಣ ಎಂದು ಸಮಾಧಾನಪಡಿಸಿದ್ದರು ಎನ್ನಲಾಗಿದೆ.

ಆದರೆ ಇದರಿಂದ ನಿರಾಶೆಗೊಂಡ ಮಹೇಶ, ಯಾರ ಗಮನಕ್ಕೂ ಬಾರದಂತೆ ಗ್ರಾಮದ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ಬಳಿಕ ಸಹೋದರ ಮಾವಂದಿರಿಗೆ ಕರೆ ಮಾಡಿ, ತಾನು ಪ್ರೀತಿಸಿದ ಯುವತಿಯನ್ನೇ ಮದುವೆಯಾಗಬೇಕು. ಇಲ್ಲವಾದರೆ ಟವರ್‌ನಿಂದ ಕೆಳಗೆ ಬೀಳುವುದಾಗಿ ಹೇಳಿದ್ದಾನೆ.

ಯುವಕ ಟವರ್ ಏರಿ ಕುಳಿತಿರುವ ವಿಷಯ ತಿಳಿಯುತ್ತಿದ್ದಂತೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಆತಂಕಗೊಂಡರು. ಎರಡು ಗಂಟೆಗೂ ಹೆಚ್ಚು ಕಾಲ ಮಹೇಶನನ್ನು ಕೆಳಗೆ ಇಳಿಯುವಂತೆ ಮನವೊಲಿಸಲು ಪ್ರಯತ್ನಿಸಿದರು. ಗ್ರಾಮಸ್ಥರೂ ಸಹ ಆತ ಕೆಳಗೆ ಬಂದರೆ ತಾನು ಪ್ರೀತಿಸಿದ ಯುವತಿಯೊಂದಿಗೆ ಮದುವೆ ಮಾಡಿಸುವುದಾಗಿ ಭರವಸೆ ನೀಡಿದರು. ಆದರೂ ಮಹೇಶ ಕೆಳಗೆ ಇಳಿಯಲಿಲ್ಲ.

ಕೊನೆಗೆ ಸಹೋದರ ಮಾವ ದೇವರ ಹೆಸರಿನಲ್ಲಿ ಆಣೆ ಮಾಡಿ, ತಾನು ಪ್ರೀತಿಸಿದ ಯುವತಿಯೊಂದಿಗೇ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ ಬಳಿಕ ಮಹೇಶ ಟವರ್‌ನಿಂದ ಕೆಳಗೆ ಇಳಿದು ಬಂದಿದ್ದಾನೆ. ಇದರಿಂದ ಸಂಬಂಧಿಕರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net