ಹಿರಿಯರ ಸುರಕ್ಷತೆಗೆ ಕಾನೂನು ವ್ಯವಸ್ಥೆ ಬದ್ಧ

ಕಲಬುರಗಿ ಜಿಪಂ ಹೊಸ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕ ಹಿರಿಯರನ್ನು ಸತ್ಕರಿಸಲಾಯಿತು. ನ್ಯಾಯಾಧೀಶ ಶ್ರೀನಿವಾಸ ನವಲೆ, ಅರುಣಕುಮಾರ ಲೋಯಾ, ಸಾದಿಕ್​ ಹುಸೇನ್​ ಖಾನ್​, ರಾಜೆ ಶಿವಶರಣಪ್ಪ ಇತರರಿದ್ದರು.
ಕಲಬುರಗಿ ಜಿಪಂ ಹೊಸ ಸಭಾಂಗಣದಲ್ಲಿ ಗುರುವಾರ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ವಿವಿಧ ಕ್ಷೇತ್ರದ ಸಾಧಕ ಹಿರಿಯರನ್ನು ಸತ್ಕರಿಸಲಾಯಿತು. ನ್ಯಾಯಾಧೀಶ ಶ್ರೀನಿವಾಸ ನವಲೆ, ಅರುಣಕುಮಾರ ಲೋಯಾ, ಸಾದಿಕ್​ ಹುಸೇನ್​ ಖಾನ್​, ರಾಜೆ ಶಿವಶರಣಪ್ಪ ಇತರರಿದ್ದರು.
Published on: 

ಕಲಬುರಗಿ: ಹಿರಿಯ ನಾಗರಿಕರು ಹಾಗೂ ಪಾಲಕರ (ಪೋಷಕರ) ಸುರಕ್ಷತೆ ಮತ್ತು ಹಕ್ಕು ರಕ್ಷಣೆಗೆ ಕಾನೂನು ವ್ಯವಸ್ಥೆ ಬದ್ಧವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆದ ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀನಿವಾಸ ನವಲೆ ಹೇಳಿದರು.

ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನ ನಿಮಿತ್ತ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಡಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿರಿಯರ ಹಕ್ಕು ಮತ್ತು ಸರ್ಕಾರದ ಯೋಜನೆಗಳ ಕುರಿತು ಜಾಗೃತಿ ಜತೆ 2007ರ ಪೋಷಕರ ಮತ್ತು ಹಿರಿಯ ನಾಗರಿಕರ ಪೋಷಣೆ ಹಾಗೂ ಕ್ಷೇಮಾಭಿವೃದ್ಧಿ ಕಾಯ್ದೆಯಡಿ 60 ವರ್ಷ ಮೇಲ್ಪಟ್ಟವರು ಹಾಗೂ ತಂದೆ-ತಾಯಂದಿರಿಗೆ ಆಸ್ತಿ ಮತ್ತು ಜೀವನಾಧಾರದ ರಕ್ಷಣೆ ಒದಗಿಸುವ ಕಾನೂನು ಅರಿವು ಕುರಿತು ವಿವರಿಸಿದರು.

ಜೀವನಾಂಶ ನೀಡದ ಹಾಗೂ ಪಾಲಕರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳನ್ನು ಮನೆಯಿಂದ ಹೊರಹಾಕುವ ಅಧಿಕಾರವೂ ಈ ಕಾಯ್ದೆಯಲ್ಲಿದೆ. ತಂದೆ-ತಾಯಂದಿರನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ಮಕ್ಕಳಿಗೆ ಮಾಡಿಕೊಟ್ಟಿದ್ದ ಗಿಫ್ಟ್​ ಡೀಡ್​ (ದಾನಪತ್ರ) ರದ್ದುಗೊಳಿಸಿ ಆಸ್ತಿ ಮರಳಿ ಹಿರಿಯರಿಗೆ ನೀಡುವ ಅಧಿಕಾರ ಉಪವಿಭಾಗಾಧಿಕಾರಿಗಳ ನೇತೃತ್ವದ ಟ್ರಿಬ್ಯೂನಲ್​ಗೆ ನೀಡಲಾಗಿದೆ ಎಂದು ತಿಳಿಸಿದರು.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿಲ್ಲಾ ಕಲ್ಯಾಣಾಧಿಕಾರಿ ಸಾದಿಕ್​ ಹುಸೇನ್​ಖಾನ್​ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ಹಿರಿಯರ ಹಕ್ಕು, ಕಾನೂನು ರಕ್ಷಣೆ ಹಾಗೂ ಅವರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಅ.1ರಂದು ಈ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಹಿರಿಯ ನ್ಯಾಯವಾದಿ ರಾಜೆ ಶಿವಶರಣಪ್ಪ ವಿಶೇಷ ಉಪನ್ಯಾಸ ನೀಡಿದರು. ಮಾತೋಶ್ರೀ ಅಂಬುಬಾಯಿ ಅಂಧ ಬಾಲಕಿಯರ ವಸತಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆ ಹಾಡಿದರು. ರೆಡ್​ ಕ್ರಾಸ್​ ಸಂಸ್ಥೆ ಜಿಲ್ಲಾಧ್ಯಕ್ಷ ಅರುಣಕುಮಾರ ಲೋಯಾ ಇತರರಿದ್ದರು. ವಿವಿಧ ೇತ್ರದಲ್ಲಿ ಸಾಧನೆಗೈದ 15 ಹಿರಿಯ ನಾಗರಿಕರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು. ಕ್ರೀಡೆ ಮತ್ತು ಸಾಂಸತಿಕ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು 68 ಹಿರಿಯರಿಗೆ ಪ್ರಥಮ 500 ರೂ, ದ್ವೀತಿಯ 300 ಮತ್ತು ತೃತೀಯ 200 ರೂ. ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕಲಬುರಗಿಯಲ್ಲಿ ಹಿರಿಯ ನಾಗರಿಕರ ಮೇಲಿನ ದೌರ್ಜನ್ಯದ ಪ್ರಕರಣಗಳ ಸಂಖ್ಯೆ ಕಡಿಮೆ ಇರುವುದು ಸಮಾಧಾನಕರ ಸಂಗತಿ. ಪ್ರತಿ ಪೊಲೀಸ್​ ಠಾಣೆಯಲ್ಲಿ ಹಿರಿಯ ನಾಗರಿಕರ ಪಟ್ಟಿ ನಿರ್ವಹಿಸಿ ಸಭೆ ನಡೆಸಲಾಗುತ್ತಿದೆ. ಉಚಿತ ಕಾನೂನು ಸಲಹೆಗಾಗಿ 15100 ಸಹಾಯವಾಣಿ ಸಂಖ್ಯೆ ಲಭ್ಯವಿದ್ದು, ಸದುಪಯೋಗ ಪಡೆದುಕೊಳ್ಳಬೇಕು.
> ಶ್ರೀನಿವಾಸ ನವಲೆ ಹಿರಿಯ ಸಿವಿಲ್​ ನ್ಯಾಯಾಧೀಶ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net