

ಕಲಬುರಗಿ: ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಾಗುತ್ತದೆ. ಒತ್ತಡದ ಬದುಕಿನ ಮಧ್ಯೆ ಮನಸ್ಸು ಉಲ್ಲಸಿತಗೊಳಿಸಲು ಕ್ರೀಡೆ ಪರಿಣಾಮಕಾರಿ ಎಂದು ಖಾಜಾ ಬಂದಾನವಾಜ್ ವಿಶ್ವವಿದ್ಯಾಲಯದ ಸಮ ಉಪಕುಲಪತಿ ಪ್ರೊ.ಅಶ್ಫಾಕ್ ಅಹ್ಮದ್ ಹೇಳಿದರು.
ಖಾಜಾ ಬಂದಾನವಾಜ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಹಬ್ಬಕ್ಕೆ ಚಾಲನೆ ನೀಡಿ ಮಾತನಾಡಿ, ಕೆಬಿಎನ್ ಟರ್ಫ್ ಅಂತಾರಾಷ್ಟ್ರೀಯ ಸೌಲಭ್ಯ ಹೊಂದಿದೆ. ವಿವಿಯ ಕುಲಾಧಿಪತಿ ಡಾ.ಸೈಯದ್ ಮುಹಮ್ಮದ್ ಅಲಿ ಅಲ್ ಹುಸ್ಸೇನಿ ಅವರು ಕ್ರೀಡೆಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿದ್ದಾರೆ. ಕ್ರೀಡಾ ಚಟುವಟಿಕೆಯಿಂದ ಆರೋಗ್ಯ ಸುಧಾರಣೆಯೂ ಸಾಧ್ಯ. ಜತೆಗೆ ಒತ್ತಡವೂ ಕಡಿಮೆಯಾಗಲಿದೆ. ಹೀಗಾಗಿ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ನಿರಂತರ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಲಸಚಿವ ಮೀರ್ ವಿಲಾಯತ್ ಅಲಿ ಮಾತನಾಡಿ, ಆಟಗಳಲ್ಲಿ ಸೋಲು-ಗೆಲುವು ಮಹತ್ವ ಅಲ್ಲ. ಭಾಗವಹಿಸುವುದು ಮುಖ್ಯ. ವಿದ್ಯಾರ್ಥಿಗಳ ಪರಿಪೂರ್ಣ ಬೆಳವಣಿಗೆಗೆ ಇಂತಹ ಅವಕಾಶ ಅವಶ್ಯಕ ಎಂದರು.
6 ದಿನಗಳ ಕಾಲ ಕೇರಂ, ಚೆಸ್, ಬ್ಯಾಡ್ಮಿಂಟನ್, ವಾಲಿಬಾಲ್, ಥ್ರೋ ಬಾಲ್, ಶಾಟ್ಫುಟ್, ರಂಗೋಲಿ, ಮೆಹಂದಿ, ಪೇಂಟಿಂಗ್, ಪೋಸ್ಟರ್, ಗಾಯನ, ನೃತ್ಯ ಸೇರಿ ವಿವಿಧ ಕ್ರೀಡೆ ಮತ್ತು ಸಂಸತಿಕ ಸ್ಪರ್ಧೆ ನಡೆಯಲಿವೆ.
ಅಕಾಡೆಮಿಕ್ ಡೀನ್ ಡಾ.ಜಮಾ ಮೂಸ್ವಿ, ಮೆಡಿಕಲ್ ಡೀನ್ ಡಾ.ಗುರುಪ್ರಸಾದ, ಐಕ್ಯೂಎಸಿ ನಿರ್ದೇಶಕ ಡಾ.ಅಬ್ದುಲ್ ಬಶೀರ್, ಇಂಜಿನಿಯರಿಂಗ್ ಡೀನ್ ಪ್ರೊ.ಸುಭಾಷ ಕಮಲ್, ಶಿಕ್ಷಣ ಡೀನ್ ಮೊಹ್ಮದ್ ಇಕ್ಬಾಲ್, ವಾಣಿಜ್ಯ ಡೀನ್ ಪ್ರೊ.ಶ್ರೀನಿವಾಸ ಇತರರಿದ್ದರು.
ವಿದ್ಯಾರ್ಥಿ ಕಲ್ಯಾಣ ಡೀನ್ ಡಾ.ಅನೂಪ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ.ಮಾರೂಫ್ ವಂದಿಸಿದರು. ವಿದ್ಯಾರ್ಥಿಗಳಾದ ಆಯೇಷಾ ಫಾತಿಮಾ ಮತ್ತು ಸನಾ ಮೆಹಕ್ ನಿರೂಪಣೆ ಮಾಡಿದರು. ಮೆಡಿಕಲ್ ವಿದ್ಯಾರ್ಥಿ ಅಫ್ರೋಜ್ ಸ್ಟೂಡೆಂಟ್ ಕೌನ್ಸಿಲ್ ಪರಿಚಯಿಸಿದರು.