ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣ ಸ್ಪಂದಿಸಿ

 ಕಾಳಗಿ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಡಿವ ನೀರಿನ ಸಭೆಯಲ್ಲಿ ಶಾಸಕ ಡಾ.ಅವಿನಾಶ ಜಾಧವ್​ ಮಾತನಾಡಿದರು. ಪೃಥ್ವಿರಾಜ ಪಾಟೀಲ್​, ಡಾ.ಬಸವಲಿಂಗಪ್ಪ ಡಿಗ್ಗಿ, ರಮೇಶ ಕಿಟ್ಟದ, ಜಿತೇಂದ್ರ ರಾಠೋಡ್​ ಇದ್ದರು.
ಕಾಳಗಿ ತಾಪಂ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಡಿವ ನೀರಿನ ಸಭೆಯಲ್ಲಿ ಶಾಸಕ ಡಾ.ಅವಿನಾಶ ಜಾಧವ್​ ಮಾತನಾಡಿದರು. ಪೃಥ್ವಿರಾಜ ಪಾಟೀಲ್​, ಡಾ.ಬಸವಲಿಂಗಪ್ಪ ಡಿಗ್ಗಿ, ರಮೇಶ ಕಿಟ್ಟದ, ಜಿತೇಂದ್ರ ರಾಠೋಡ್​ ಇದ್ದರು.
Published on: 

ಕಾಳಗಿ: ಎಲ್ಲೆಡೆ ಬರ ಆವರಿಸಿರುವುದರಿಂದ ತಾಲೂಕಿನಲ್ಲಿ ಕುಡಿವ ನೀರಿನ ಸಮಸ್ಯೆ ತಲೆದೂರುವ ಲಕ್ಷಣಗಳಿದ್ದು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಸಮಸ್ಯೆಗೆ ತಣ ಸ್ಪಂದಿಸಿ ಪರಿಹಾರ ಕಲ್ಪಿಸುವ ಕೆಲಸ ಮಾಡಬೇಕು ಎಂದು ಶಾಸಕ ಡಾ.ಅವಿನಾಶ ಜಾಧವ್​ ಸೂಚನೆ ನೀಡಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಜನ, ಜಾನುವಾರಿಗೆ ಕುಡಿವ ನೀರಿಗೆ ತೊಂದರೆಯಾಗದಂತೆ ಯೋಜನೆ ರೂಪಿಸಿ ಕಾರ್ಯಗತಗೊಳಿಸಬೇಕು. ಗ್ರಾಮಗಳ ಜಲ ಮೂಲಗಳ ಮಾಹಿತಿ ಪಡೆಯಬೇಕು. ಸಣ್ಣ&ಪುಟ್ಟ ದುರಸ್ತಿ ಕಾರ್ಯ ವಾರದೊಳಗೆ ಕೈಗೊಳ್ಳಬೇಕು. ಕೊಳವೆಬಾವಿಗಳ ಸಮರ್ಪಕ ಕಾರ್ಯ ನಿರ್ವಹಣೆ ಬಗ್ಗೆ ಗಮನ ಹರಿಸಬೇಕು ಎಂದು ತಾಕೀತು ಮಾಡಿದರು.

ಮಂಗಲಗಿ, ಕೋಡ್ಲಿ, ತೇಗಲತಿಪ್ಪಿ, ತೆಂಗಳಿ, ಅಲ್ಲಾಪುರ ಸೇರಿ ಇತರೆ ಸಮಸ್ಯಾತ್ಮಕ ಗ್ರಾಮ ಹಾಗೂ ವಸತಿನಿಲಯಗಳಿಗೆ ಕೂಡಲೇ ನೀರು ಪೂರೈಸಬೇಕು. ಗೋಶಾಲೆಗಳಿಗೆ ಮೇವು ಒದಗಿಸಬೇಕು. ಗ್ರಾಮಗಳಲ್ಲಿ ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಿ, ನೀರಿನ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.

ಕುಡಿವ ನೀರಿನ ಸಮಸ್ಯೆ ವಿಚಾರದಲ್ಲಿ ರ್ನಿಲಕ್ಷ ವಹಿಸಿದರೆ ಸುಮ್ಮನಿರುವುದಿಲ್ಲ. ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಈ ದಿಸೆಯಲ್ಲಿ ವಿಶೇಷ ನಿಗಾ ವಹಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾಗಿಲ್ಲ. ಹೀಗಾಗಿ ಕುಡಿವ ನೀರು ಸೇರಿ ವಿವಿಧ ಮೂಲ ಸೌಕರ್ಯಗಳ ಸಮಸ್ಯೆ ಪರಿಹರಿಸಲು ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನಹರಿಸಿ ನೆರವು ಕೊಡಿಸಲು ಮುಂದಾಗಬೇಕು ಎಂದು ಮನವಿ ಮಾಡಿದರು.

ತಹಸಿಲ್ದಾರ್​ ಪೃಥ್ವಿರಾಜ್​ ಪಾಟೀಲ್​, ತಾಪಂ ಇಒ ಡಾ.ಬಸವಲಿಂಗಪ್ಪ ಡಿಗ್ಗಿ, ಪ್ರಮುಖರಾದ ರಮೇಶ ಕಿಟ್ಟದ, ಜಿತೇಂದ್ರ ರಾಠೋಡ್​, ಇಲಿಯಾಸ್​ ಅಹ್ಮದ್​, ವಿಜಯಕುಮಾರ್​ ಚೆಂಗಟಿ, ಸಂತೋಷ ಪಾಟೀಲ್​ ಮಂಗಲಗಿ, ಪ್ರಶಾಂತ ಕದಂ, ರೇವಣಸಿದ್ಧ ಬಡಾ, ಜಗದೀಶ ಪಾಟೀಲ್​ ಹಾಗೂ ವಿವಿಧ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು ಭಾಗಿಯಾಗಿದ್ದರು.

ಅನುದಾನವಿಲ್ಲ ಎಂಬುದು ಸೇರಿ ಇನ್ನಿತರ ಕಾರಣ ಮುಂದಿಟ್ಟುಕೊಂಡು ಕುಡಿವ ನೀರಿನ ಸಮಸ್ಯೆ ಮುಂದುವರಿಯಲು ಬಿಡಬಾರದು. ಜನರಿಗೆ ಕುಡಿವ ನೀರು ಒದಗಿಸುವುದು ನಿಮ್ಮ ಜವಾಬ್ದಾರಿ. ಯಾವುದೇ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೂರಿದರೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಕೆಲಸ ಮಾಡಬೇಕು.
> ಡಾ.ಅವಿನಾಶ ಜಾಧವ್​, ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net