ಜೇವರ್ಗಿ ಕಾಲುವೆ ಕೊನೆ ರೈತರಿಗೆ ಸಮರ್ಪಕ ನೀರು ಹರಿಸಲು 2 ಟಿಎಂಸಿ ನೀರು ಕಾಯ್ದಿರಿಸಿ: ಸಿಎಂಗೆ ಡಾ. ಅಜಯ್ ಧರ್ಮಸಿಂಗ್ ಮನವಿ

: JBCಗೆ ಅಗತ್ಯ ಪ್ರಮಾಣದ 880 ಕ್ಯೂಸೆಕ್ಸ್ ನೀರು ಹರಿಸಲು ಒತ್ತಾಯ : MBC ಟೇಲ್ ಎಂಡ್ ಪ್ರದೇಶಗಳಿಗೆ ನೀರು ತಲುಪಿಸಲು ಹಾಗೂ ಕುಡಿಯುವ ನೀರಿನ ಅಗತ್ಯ ಪೂರೈಸಲು ಕ್ರಮಕ್ಕೆ ಆಗ್ರಹ
ಜೇವರ್ಗಿ ಕಾಲುವೆ ಕೊನೆ ರೈತರಿಗೆ ಸಮರ್ಪಕ ನೀರು ಹರಿಸಲು 2 ಟಿಎಂಸಿ ನೀರು ಕಾಯ್ದಿರಿಸಿ: ಸಿಎಂಗೆ ಡಾ. ಅಜಯ್ ಧರ್ಮಸಿಂಗ್ ಮನವಿ
Published on: 

ಕಲಬುರಗಿ: ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರ ಬೆಳೆ ರಕ್ಷಣೆ, ಜನರ ಕುಡಿಯುವ ನೀರು ಹಾಗೂ ಜಾನುವಾರುಗಳ ನೀರಿನ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು JBC ಮತ್ತು MBC ಕಾಲುವೆಗಳಿಗೆ ಸಮರ್ಪಕ ಪ್ರಮಾಣದಲ್ಲಿ ನೀರು ಹರಿಸುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಅಜಯ್ ಧರ್ಮಸಿಂಗ್ ಅವರು ಮುಖ್ಯಮಂತ್ರಿ ಶ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.

JBC ಕಾಲುವೆಯ ಡಿಸ್ಟ್ರಿಬ್ಯೂಟರ್ ಸಂಖ್ಯೆ D-9ರಿಂದ D-18ರವರೆಗೆ ಪ್ರಸ್ತುತ ಸುಮಾರು 600 ಕ್ಯೂಸೆಕ್ಸ್ ನೀರು ಹರಿಸಲಾಗುತ್ತಿದ್ದು, ಟೇಲ್ ಎಂಡ್ ಪ್ರದೇಶಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ರೈತರ ಅಗತ್ಯವನ್ನು ಪರಿಗಣಿಸಿ ಸುಮಾರು 880 ಕ್ಯೂಸೆಕ್ಸ್ ನೀರು ಹರಿಸುವುದು ಅಗತ್ಯವಿದ್ದು, ಮುಂದಿನ ಬೇಸಿಗೆ ಅವಧಿಯ ನೀರಿನ ಅಗತ್ಯಕ್ಕಾಗಿ 2 ಟಿಎಂಸಿ ನೀರನ್ನು ಕಾಯ್ದಿರಿಸಿ ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಕೋರಿದ್ದಾರೆ.

ಅದೇ ರೀತಿ MBC ಕಾಲುವೆಯ ಜೇವರ್ಗಿ ವ್ಯಾಪ್ತಿಯ ಡಿಸ್ಟ್ರಿಬ್ಯೂಟರ್ D-18ರಿಂದ D-26ರವರೆಗೆ ಸುಮಾರು 450 ಕ್ಯೂಸೆಕ್ಸ್ ನೀರಿನ ಅಗತ್ಯವಿದ್ದು, ಪ್ರಸ್ತುತ ಸುಮಾರು 200 ಕ್ಯೂಸೆಕ್ಸ್ ಮಾತ್ರ ಹರಿಯುತ್ತಿರುವುದರಿಂದ ಟೇಲ್ ಎಂಡ್ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ ಎಂದು ಅವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಈ ಭಾಗದ ಗ್ರಾಮಗಳಲ್ಲಿ ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅಗತ್ಯ ಹೆಚ್ಚಿದ್ದು, ಜೊತೆಗೆ ತೊಗರಿ, ಹತ್ತಿ ಮತ್ತು ಮೆಣಸಿನಕಾಯಿ ಸೇರಿದಂತೆ ಬೆಳೆಗಳು ನೀರಿನ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ.

JBC–ಭೀಮಾ ನದಿ ಸಂಪರ್ಕಿತ ಪ್ರದೇಶಗಳು, ನಾಲೆಗಳು ಹಾಗೂ ಬ್ಯಾರೇಜ್‌ಗಳಿಗೆ ಅಗತ್ಯ ಪ್ರಮಾಣದಲ್ಲಿ ನೀರು ತಲುಪಿಸುವ ಮೂಲಕ ಸ್ಥಳೀಯ ಜಲಮೂಲಗಳನ್ನೂ ತುಂಬಿಸಲು ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

“ಟೇಲ್ ಎಂಡ್ ರೈತರಿಗೆ ನೀರು ತಲುಪದಿದ್ದರೆ ಕಾಲುವೆಯಲ್ಲಿ ನೀರು ಹರಿಸಿದ ಉದ್ದೇಶವೇ ಈಡೇರುವುದಿಲ್ಲ. ಈಗ ಬೆಳೆ ರಕ್ಷಣೆ ಮಾತ್ರವಲ್ಲ, ಜನರು ಮತ್ತು ಜಾನುವಾರುಗಳ ಕುಡಿಯುವ ನೀರಿನ ಅಗತ್ಯವೂ ಅತ್ಯಂತ ಮುಖ್ಯವಾಗಿದೆ. ಆದ್ದರಿಂದ ಅಗತ್ಯ ಪ್ರಮಾಣದಲ್ಲಿ ನೀರು ಹರಿಸಿ, ನವೆಂಬರ್ 30ರವರೆಗೆ ರೈತರಿಗೆ ಅನುಕೂಲ ಕಲ್ಪಿಸಬೇಕು,” ಎಂದು ಡಾ. ಅಜಯ್ ಧರ್ಮಸಿಂಗ್ ಮನವಿ ಮಾಡಿದ್ದಾರೆ.

ಈ ಸಂಬಂಧ ಅಗತ್ಯ ತಾಂತ್ರಿಕ ಪರಿಶೀಲನೆ ನಡೆಸಿ, ಜೇವರ್ಗಿ ಭಾಗದ ರೈತರು ಹಾಗೂ ಸಾರ್ವಜನಿಕರಿಗೆ ತಕ್ಷಣ ಅನುಕೂಲವಾಗುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಮುಖ್ಯಮಂತ್ರಿಗಳನ್ನು ಅವರು ಕೋರಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ಸಚಿವರು ಹಾಗು ಶಹಾಪುರ ಶಾಸಕರಾದ ಶ್ರೀ ಶರಣಬಸಪ್ಪ ದರ್ಶನಾಪುರ ಹಾಗು ಸುರಪುರ ಶಾಸಕಕರಾದ ಶ್ರೀ ವೇಣುಗೋಪಾಲ್ ನಾಯಕ್ ಅವರು ಉಪಸ್ಥಿತರಿದ್ದರು