

ಕಲಬುರಗಿ: ಜೇವರ್ಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೈತರ ಬೆಳೆ ರಕ್ಷಣೆ, ಕುಡಿವ ನೀರು ಹಾಗೂ ಜಾನುವಾರುಗಳ ನೀರಿನ ಅಗತ್ಯ ಗಮನದಲ್ಲಿಟ್ಟುಕೊಂಡು ಜೇವರ್ಗಿ ಶಾಖಾ ಕಾಲುವೆ, ಇಂಡಿ ಹಾಗೂ ಮುಡಬೂಳ ಶಾಖಾ ಕಾಲುವೆಗಳಿಗೆ ಬೇಸಿಗೆ ಅಂತ್ಯದವರೆಗೂ 2 ಟಿಎಂಸಿ ನೀರು ಹರಿಸುವಂತೆ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್ ಧರ್ಮಸಿಂಗ್ ಮನವಿ ಮಾಡಿದರು.
ಈ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿ, ಜೇವರ್ಗಿ ವಿಧಾನಸಭಾ ಮತ ಕ್ಷೇತ್ರದ ವ್ಯಾಪ್ತಿಗೆ ಬರುವ ಜೆಬಿಸಿ ಕಾಲುವೆಯ ಡಿಸ್ಟ್ರಿಬ್ಯೂಟರ್ ನಂ.ಡಿ.9 ದಿಂದ ಡಿ.18ವರೆಗೆ ವಡಗೇರಾದಿಂದ ಸುಂಬಡವರೆಗೆ 600 ಕ್ಯೂಸೆಕ್ ನೀರು ಬಿಡುತ್ತಿದ್ದು, ಟೇಲ್ಎಂಡ್ವರೆಗೆ ನೀರು ತಲುಪುತ್ತಿಲ್ಲ. ಹೀಗಾಗಿ ಜೆಬಿಸಿಯ ವಡಗೇರಾದಿಂದ ಸುಂಬಡದವರೆಗೆ 880 ಕ್ಯೂಸೆಕ್ ನೀರು ಹರಿಸಿ ಟೇಲ್ಎಂಡ್ ರೈತರಿಗೂ ನೀರು ತಲುಪಿಸುವ ಅಗತ್ಯವಿದೆ ಎಂದು ತಿಳಿಸಿದರು.
ಡಿಸ್ಟ್ರಿಬ್ಯೂಟರ್ 18 ರಿಂದ 26ರವರೆಗೆ ಜೇವರ್ಗಿ ವ್ಯಾಪ್ತಿ ಬರುವ ಎಂಬಿಸಿ ಕಾಲುವೆಗೆ 450 ಕ್ಯೂಸೆಕ್ ಒಳ ಹರಿವು ಇರಬೇಕಾದ ಜಾಗದಲ್ಲಿ ಕೇವಲ 200 ಕ್ಯೂಸೆಕ್ ಒಳಹರಿವು ಇರುವುದರಿಂದ ಇಲ್ಲಿಯೂ ಟೇಲ್ಎಂಡ್ನಲ್ಲಿರುವ ಮದರಿ, ಕಟ್ಟಿಸಂಗಾವಿ, ಗುಡೂರ್ ಎಸ್.ಎ., ರಾಜವಾಳ, ಬಿರಾಳ್ ಗ್ರಾಮಗಳಿಗೆ ನೀರು ಬರುತ್ತಿಲ್ಲ ಎಂದು ವಿವರಿಸಿದರು.
ಇಂಡಿ ಶಾಖಾ ಕಾಲುವೆಯ ಸಂಪರ್ಕಿತ ಭೀಮಾ ನದಿಗೆ 34ನೇ ಮತ್ತು 50ನೇ ಕಿ.ಮೀ. ನೀರು ಬಿಟ್ಟರೆ ಬಳ್ಳುಂಡಗಿ ನಾಲಾದಿಂದ ಕಲ್ಲೂರು ಬ್ಯಾರೇಜ್ಗೆ ನೀರು ಬಂದು ಸೇರುತ್ತದೆ. ಡಿಸ್ಟ್ರಿಬ್ಯೂಟರ್ 5 ದಿಂದ 11ರವರೆಗೆ ಜೇವರ್ಗಿ ಸರಹದ್ದು ಬರುತ್ತಿದ್ದು, ಟೇಲ್ಎಂಡ್ನಲ್ಲಿ ಬರುವ ಕಲ್ಲೂರು (ಬಿ), ಕಲ್ಲೂರು (ಕೆ), ಮಂದೆವಾಲ್, ಬಳ್ಳುಂಡಗಿ, ನೆಲೋಗಿ ಸೇರಿ ಇತರೆ ಗ್ರಾಮಗಳಿಗೆ ನೀರು ತಲುಪುವ ಅಗತ್ಯವಿದೆ ಎಂದರು.
ಮುಂಗಾರು ಬೆಳೆಗಳಾದ ತೊಗರಿ, ಹತ್ತಿ, ಮೆಣಸಿನಕಾಯಿ ಸೇರಿ ಇತರೆ ಬೆಳೆಗಾಗಿ ನ.30ರವರೆಗೆ ನೀರು ಹರಿಸಬೇಕು. ಜೇವರ್ಗಿ ಮತ್ತು ಯಡ್ರಾಮಿ ತಾಲೂಕಿನ ಜನ&ಜಾನುವಾರು, ಪ್ರಾಣಿ, ಪಗಳಿಗೆ ಕುಡಿವ ನೀರು ಅತ್ಯವಶ್ಯಕವಾಗಿರುವ ಹಿನ್ನೆಲೆಯಲ್ಲಿ ಬರುವ ಬೇಸಿಗೆ (ಮೇ ಅಂತ್ಯ)ವರೆಗೆ ಐಬಿಸಿ, ಜೆಬಿಸಿ ಹಾಗೂ ಎಂಬಿಸಿ ಕಾಲುವೆಗಳಿಗೆ 2 ಟಿಎಂಸಿ ನೀರು ಅವಶ್ಯಕತೆ ಇದೆ ಎಂದು ಮನವರಿಕೆ ಮಾಡಿದರು.
ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ, ಸುರಪುರ ಶಾಸಕ ವೇಣುಗೋಪಾಲ್ ಇದ್ದರು.