ಬೆಣ್ಣೆತೊರಾ ನೀರು ಅಕ್ರಮ ಬಳಕೆಗೆ ಕಡಿವಾಣ ಹಾಕಿ

ಬೆಣ್ಣೆತೊರಾ ನೀರು ಅಕ್ರಮ ಬಳಕೆಗೆ ಕಡಿವಾಣ ಹಾಕಬೇಕು, ತಡಕಲ್​ ಜನರಿಗೆ ಸಮರ್ಪಕ ಕುಡಿವ ನೀರು ಪೂರೈಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಮಲಾಪುರ ತಾಲೂಕಿನ ತಡಕಲ್​ ಕ್ರಾಸ್​ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಶರಣಬಸಪ್ಪ ಮಮಶೆಟ್ಟಿ, ದಿಲೀಪ್​ ನಾಗೂರೆ, ಅನಿಲ್​ ಗುತ್ತೇದಾರ್​, ಶರಣಕುಮಾರ ಅಂಬಲಗಿ, ವಿಶಾಲ ಗುತ್ತೇದಾರ್​ ಇತರರಿದ್ದರು.
ಬೆಣ್ಣೆತೊರಾ ನೀರು ಅಕ್ರಮ ಬಳಕೆಗೆ ಕಡಿವಾಣ ಹಾಕಬೇಕು, ತಡಕಲ್​ ಜನರಿಗೆ ಸಮರ್ಪಕ ಕುಡಿವ ನೀರು ಪೂರೈಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಮಲಾಪುರ ತಾಲೂಕಿನ ತಡಕಲ್​ ಕ್ರಾಸ್​ನಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಶರಣಬಸಪ್ಪ ಮಮಶೆಟ್ಟಿ, ದಿಲೀಪ್​ ನಾಗೂರೆ, ಅನಿಲ್​ ಗುತ್ತೇದಾರ್​, ಶರಣಕುಮಾರ ಅಂಬಲಗಿ, ವಿಶಾಲ ಗುತ್ತೇದಾರ್​ ಇತರರಿದ್ದರು.
Published on: 

ಕಮಲಾಪುರ: ಜೀವಣಗಿ ಬಳಿ ಕಾರ್ಯನಿರ್ವಹಿಸುತ್ತಿರುವ ಇಥೆನಾಲ್​ ಕಂಪನಿಯು ಬೆಣ್ಣೆತೊರಾ ಅಣೆಕಟ್ಟಿನ ನೀರನ್ನು ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದು, ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದಿಂದ ತಡಕಲ್​ ಕ್ರಾಸ್​ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಈ ವರ್ಷ ಸಮರ್ಪಕ ಮಳೆಯಾಗದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ತೀವ್ರ ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಜನರು ಕಿಮೀ. ಗಟ್ಟಲೆ ನಡೆದುಕೊಂಡು ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಾನುವಾರುಗಳಿಗೂ ಕುಡಿವ ನೀರು ಸಿಗುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಜೀವಣಗಿ ಇಥೆನಾಲ್​ ಕಂಪನಿಯು ಬೆಣ್ಣೆತೊರಾ ಅಣೆಕಟ್ಟಿನ ನೀರನ್ನು ಬಳಸುತ್ತಿರುವುದು ಖಂಡನೀಯ ಎಂದರು.

ನಾಗೂರು ಹಜರತ್​ ಕಟ್ಟೆ ನವಾಜ್​ ದರ್ಗಾ ಸಮೀಪದ ನದಿ ದಡದಲ್ಲಿ 100 ಎಚ್​ಪಿ ಸಾಮರ್ಥ್ಯದ ಎರಡು ಮೋಟಾರ್​ಗಳನ್ನು ಅಳವಡಿಸಿ, ಸುಮಾರು 3 ಕಿಮೀ. ಉದ್ದದ ಪೈಪ್​ಲೈನ್​ ಮೂಲಕ ಕಂಪನಿಗೆ ನೀರು ಪೂರೈಸಲಾಗುತ್ತಿದೆ. ಕಂಪನಿಗೆ ನೀರು ಬಳಸಲು ಅನುಮತಿ ನೀಡಿದವರು ಯಾರು ಎಂಬುದನ್ನು ಜಿಲ್ಲಾಡಳಿತ ಸ್ಪಷ್ಟಪಡಿಸಬೇಕು. ತಣ ನೀರು ಪೂರೈಕೆ ಸ್ಥಗಿತಗೊಳಿಸಿ, ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಡಕಲ್​ ಕ್ರಾಸ್​ ನಿವಾಸಿಗಳಿಗೆ ಸಮರ್ಪಕ ಕುಡಿವ ನೀರು ಪೂರೈಸಬೇಕು. ಸರ್ಕಾರಿ ಶಾಲೆಗೆ ಕಾಂಪೌಂಡ್​ ನಿರ್ಮಿಸಿ, ಮಕ್ಕಳಿಗೆ ಪ್ರತಿದಿನ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಮುಖ್ಯ ರಸ್ತೆಯಿಂದ ಶಾಲೆವರೆಗೆ ರಸ್ತೆ ನಿರ್ಮಿಸಬೇಕು. ಕ್ರಾಸ್​ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹೇರೂರು ಕ್ರಾಸ್​ನ ಕೆಟ್ಟುಹೋಗಿರುವ ಹೈಮಾಸ್ಟ್​ ದೀಪ ದುರಸ್ತಿಪಡಿಸಬೇಕು. ನಾಗೂರು ಗ್ರಾಪಂನಲ್ಲಿ 2022ರಿಂದ 2025ರವರೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ನಡೆದಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರ್​ ಮಹಮ್ಮದ್​ ಮೋಹಸಿನ್​ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಪ್ರಮುಖರಾದ ದಿಲೀಪ್​ ನಾಗೂರೆ, ಅನಿಲ್​ ಗುತ್ತೇದಾರ್​, ಶರಣಕುಮಾರ ಅಂಬಲಗಿ, ವಿಶಾಲ ಗುತ್ತೇದಾರ್​, ಬಸವರಾಜ ಹೊಸಮನಿ, ಗುರುಸಿದ್ದಪ್ಪ ಏರಿ, ಪ್ರವಿಣ ಅಂಬಲಗಿ, ನಾಗರಾಜ ರಾಜನಾಳ, ಪ್ರಶಾಂತ ಡಬರಬದಿ, ಈರಣ್ಣ ಏರಿ ಇತರರಿದ್ದರು.