

ಕಲಬುರಗಿ: ಯುವಕರು ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯ ತೊಡಗಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರಗಳು ಪ್ರೋತ್ಸಾಹದಾಯಕವಾಗಿವೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶಶಿಕಾಂತ ಎಸ್.ಉಡಿಕೇರಿ ಹೇಳಿದರು.
ವಿವಿ ರಾಷ್ಟ್ರೀಯ ಸೇವಾ ಯೋಜನೆ ಕೋಶದಿಂದ ಜ್ಞಾನಗಂಗಾ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ಅಂತರ್ ಮಹಾವಿದ್ಯಾಲಯಗಳ ಎನ್ಎಸ್ಎಸ್ ವಿಶೇಷ ಶಿಬಿರ ಸಮಾರೋಪದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ನಾಯಕತ್ವ, ನಿಸ್ವಾರ್ಥ ಸೇವೆ ಮತ್ತು ಆಸಕ್ತಿಯಿಂದ ಭಾಗವಹಿಸುವುದರೊಂದಿಗೆ ಉನ್ನತ ಸಾಧನೆ ಸಾಧ್ಯ ಎಂದರು.
ಕಠಿಣ ಪರಿಸ್ಥಿತಿ ಎದುರಿಸುವ ಸಾಮರ್ಥ್ಯ, ಸಕಾರಾತ್ಮಕ ಮನೋಭಾವ, ಆತ್ಮಸ್ಥೆರ್ಯ ಮತ್ತು ಸಮೂಹಿಕ ಶಕ್ತಿ ಎನ್ನೆಸ್ಸೆಸ್ ಬೆಳೆಸುತ್ತದೆ. ಸಕ್ರಿಯ ಭಾಗವಹಿಸುವಿಕೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಮೂಲಕ ಸಾಮಾಜಿಕ ಜವಾಬ್ದಾರಿ ಮತ್ತು ನಾಯಕತ್ವ ಗುಣ ಬೆಳೆಸಿಕೊಳ್ಳಬಹುದು ಎಂದು ಹೇಳಿದರು.
ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ.ಎಚ್.ಎಸ್. ಜಂಗೆ ಮಾತನಾಡಿ, ಸಾರ್ವಜನಿಕ ಸೇವೆ ಮೂಲಕ ಅಭಿವೃದ್ಧಿ ಮಾಡಲು ವಿದ್ಯಾರ್ಥಿಗಳು ಮೌಲಿಕ ಅನುಭವ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುಲಸಚಿವ ಮೊಹಮ್ಮದ್ ಶಕೀಲ್, ಮೌಲ್ಯಮಾಪನ ಕುಲಸಚಿವೆ ಪ್ರೊ.ಅಶ್ವಿನಿ, ವಿತ್ತಾಧಿಕಾರಿ ಜಯಾಂಬಿಕ, ಡಾ.ಅವಿನಾಶ ಕಂಟಿಕರ್, ಡಾ.ವಿದ್ಯಾಸಾಗರ, ವಸಂತ ರಾಠೋಡ್ ಇತರರಿದ್ದರು. ಶಿಬಿರಾರ್ಥಿಗಳಾದ ಪ್ರಕಾಶ್ ಎಸ್., ಮೇಘಾ ಪಾಟೀಲ್ ಅನಿಸಿಕೆ ಹಂಚಿಕೊಂಡರು. ಐಶ್ವರ್ಯ ಸ್ವಾಗತಿಸಿದರು. ಸೌಂದರ್ಯ, ಭಾಗ್ಯ ವಂದಿಸಿದರು.