

ಕಲಬುರಗಿ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಅಕ್ಟೋಬರ್ 23 (ಶುಕ್ರವಾರ) ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ನಡೆಯುವ ಮತದಾನಕ್ಕೆ ಕಲಬುರಗಿ ಜಿಲ್ಲೆಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಮತದಾನಕ್ಕೆ ಒಟ್ಟು 40 ಮತಗಟ್ಟೆ ಸ್ಥಾಪನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಇಕ್ರಂ ಶರೀಫ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 5,672 ಪುರುಷ, 4,980 ಮಹಿಳೆ ಸೇರಿ 10,652 ಮತದಾರರು ಮತ ಚಲಾಯಿಸಲು ಹೆಸರು ನೋಂದಣಿ ಮಾಡಿಕೊಂಡಿದ್ದು, ಪ್ರತಿ ಮತಗಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸಲಾಗಿದೆ. ಇನ್ನು ಮತ ಚಲಾಯಿಸುವ ಮತದಾರರಿಗೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿ ಹಚ್ಚಲಾಗುತ್ತದೆ ಎಂದು ಇಕ್ರಂ ಶರೀಫ್ ತಿಳಿಸಿದ್ದಾರೆ.
ಇನ್ನು ಮತದಾರರ ಗುರುತಿನ ಚೀಟಿ ಹೊಂದಿರದ ಮತದಾರರು ಚುನಾವಣಾ ಅಯೋಗದ ನಿರ್ದೇಶನದಂತೆ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಇಂಡಿಯನ್ ಪಾಸ್ ಪೋರ್ಟ್, ಕೇಂದ್ರ/ ರಾಜ್ಯ ಸರ್ಕಾರ / ನಿಗಮ-ಮಂಡಳಿ/ ಸ್ಥಳೀಯ ಸಂಸ್ಥೆ/ ಖಾಸಗಿ ಸಂಸ್ಥೆ ನೀಡಿರುವ ಗುರುತಿನ ಚೀಟಿ, ಎಂ.ಪಿ, ಎಂ.ಎಲ್.ಎ, ಎಂ.ಎಲ್.ಸಿ ಗಳಿಗೆ ನೀಲಡಾಗಿರುವ ಅಧಿಕೃತ ಗುರುತಿನ ಚೀಟಿ, ಶಿಕ್ಷಣ ಸಂಸ್ಥೆ ನೀಡುವ ಗುರುತಿನ ಚೀಟಿ, ವಿಶ್ವವಿದ್ಯಾಲಯ ನೀಡಿರುವ ಡಿಪ್ಲೋಮಾ-ಪದವಿ ಪ್ರಮಾಣ ಪತ್ರ, ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಗುರುತಿನ ಚೀಟಿ, ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ ವಿತರಿಸುವ ಯು.ಡಿ.ಐ.ಡಿ ಕಾರ್ಡ್ ಹೀಗೆ 14 ರಲ್ಲಿ ಯಾವುದಾದರು ಒಂದು ಮೂಲ ಗುರುತಿನ ಚೀಟಿ ತೋರಿಸಿ ಮತ ಚಲಾಯಿಸಬಹುದಾಗಿದೆ.
ಈ ಚುನಾವಣೆಯಲ್ಲಿ ಮತದಾನವು ಮತಪತ್ರ ಮುಖಾಂತರ ಪ್ರಾಶಸ್ತ ಮತ ನೀಡಲು ಅವಕಾಶವಿರುತ್ತದೆ. ಚುನಾವಣಾ ಕಣದಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗೂ ಪ್ರಾಶಸ್ತ್ಯದ ರೂಪದಲ್ಲಿ ಮತದಾರ ಮತ ನೀಡಬಹುದಾಗಿದೆ. ಪ್ರಾಶಸ್ತ್ಯ ಮತ ನೀಡುವಾಗ ಕ್ರಮ ಸಂಖ್ಯೆ ಕೈಬಿಟ್ಟು ಚಲಾಯಿಸಿದ ನಂತರದ ಮತಗಳು ಅಮಾನ್ಯವಾಗಲಿದ್ದು, ಮತದಾರರು ಇದನ್ನು ಗಮನಿಸಬೇಕು. ಇನ್ನು ಮತಗಟ್ಟೆಯಲ್ಲಿ ನೀಡಲಾಗುವ ನೆರಳೆ ಬಣ್ಣದ (Violate sketch pen) ಪೆನ್ನಿನ ಮುಖಾಂತರ ಮಾತ್ರ ಮತ ಚಲಾಯಿಸಬೇಕೆಂದು ಮನವಿ ಮಾಡಿದ್ದಾರೆ.
ಕಲಬುರಗಿ ನಗರದಲ್ಲಿ ಎಂ.ಎಸ್.ಕೆ. ಮಿಲ್ ರಸ್ತೆಯ ಸರ್ಕಾರಿ ಐ.ಟಿ.ಐ ಕಾಲೇಜು ಎಡ ಭಾಗ ಮತ್ತು ಬಲ ಭಾಗ, ನೂತನ ವಿದ್ಯಾಲಯ ಕನ್ಯಾ ಪ್ರೌಢ ಶಾಲೆ ಬಲ ಭಾಗ ಮತ್ತು ಎಡ ಭಾಗ, ಸೂಪರ್ ಮಾರ್ಕೆಟ್ ಪ್ರದೇಶದಲ್ಲಿ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜು(ಎಂ.ಪಿ.ಎಚ್.ಎಸ್), ಗಂಜ್ ಪ್ರದೇಶದಲ್ಲಿನ ನಗರೇಶ್ವರ ಪ್ರೌಢ ಶಾಲೆ, ಸರ್ಕಾರಿ ಜ್ಯೂನಿಯರ್ ಕಾಲೇಜು ಆದರ್ಶ ನಗರ ಬಲ ಭಾಗ ಮತ್ತು ಎಡ ಭಾಗ, ಕಲಬುರಗಿ ತಹಶೀಲ್ದಾರ ಕಚೇರಿ ಹಾಗೂ ಗುಲಬರ್ಗಾ ವಿಶ್ವವಿದ್ಯಾಲಯ ಆವರಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ.
ಉಳಿದಂತೆ ಕಲಬುರಗಿ ತಾಲೂಕಿನ ಪಟ್ಟಣ ನಾಡ ಕಚೇರಿ, ಫರಹತಾಬಾದ ನಾಡ ಕಚೇರಿ ಹೊಸ ಬಿಲ್ಡಿಂಗ್ ಹಾಗೂ ಅವರಾದ ನಾಡ ಕಚೇರಿ, ಕಮಲಾಪೂರ ತಾಲೂಕಿನ ಕಮಲಾಪೂರ ಸರ್ಕಾರಿ ಬಾಲಕರ ಪಿ.ಯು. ಕಾಲೇಜು ಮತ್ತು ಮಹಾಗಾಂವ್ ಕ್ರಾಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಫಜಲಪೂರ ತಾಲೂಕಿನ ಅಫಜಲಪೂರ ತಹಶೀಲ್ದಾರ ಕಚೇರಿ, ಚೌಡಾಪೂರ ಗ್ರಾ.ಪಂ. ಕಚೇರಿ ಹಾಗೂ ಕರಜಗಿ ಗ್ರಾ.ಪಂ. ಕಚೇರಿ, ಆಳಂದ ತಾಲೂಕಿನ ಆಳಂದ ಹಳೇ ತಹಶೀಲ್ದಾರ ಕಚೇರಿ, ಖಜೂರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮಾದನಹಿಪ್ಪರಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನರೋಣಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ನಿಂಬರ್ಗಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.
ಜೇವರ್ಗಿ ತಾಲೂಕಿನ ಜೇವರ್ಗಿ ಮಿನಿ ವಿಧಾನಸೌಧ ತಹಶೀಲ್ದಾರ ಕಚೇರಿ ಕೋಣೆ ಸಂಖ್ಯೆ 10, ಆಂದೋಲಾ ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ, ನೆಲೋಗಿ ಗ್ರಾ.ಪಂ. ಕಚೇರಿ, ಯಡ್ರಾಮಿ ತಾಲೂಕಿನ ಯಡ್ರಾಮಿ ತಹಶೀಲ್ದಾರ ಕಚೇರಿ ಮತ್ತು ಇಜೇರಿ ನಾಡ ಕಚೇರಿ, ಸೇಡಂ ತಾಲೂಕಿನ ಸೇಡಂ ತಹಸೀಲ್ದಾರ ಕಚೇರಿ, ಮುಧೋಳ ಗ್ರಾ.ಪಂ. ಕಚೇರಿ, ಕೋಡ್ಲಾ ಗ್ರಾ.ಪಂ. ಕಚೇರಿ ಹಾಗೂ ಅಡಕಿ ಸರ್ಕಾರಿ ಪ್ರೌಢ ಶಾಲೆ, ಚಿತ್ತಾಪುರ ತಾಲೂಕಿನ ಚಿತ್ತಾಪುರ ತಹಶೀಲ್ದಾರ ಕಚೇರಿ ಮತ್ತು ವಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಂಚೋಳಿ ತಾಲೂಕಿನ ಚಿಂಚೋಳಿ ತಹಶೀಲ್ದಾರ ಕಚೇರಿ, ಐನಾಪೂರ ನಾಡ ಕಚೇರಿ, ಸುಲೆಪೇಟ್ ಸರ್ಕಾರಿ ಪಬ್ಲಿಕ್ ಸ್ಕೂಲ್ ಹಾಗೂ ಕೋಡ್ಲಿ ನಾಡ ಕಚೇರಿ, ಕಾಳಗಿ ತಾಲೂಕಿನಲ್ಲಿ ಕಾಳಗಿ ಟೌನ್ ಪಂಚಾಯತ್ ಕಚೇರಿ, ಶಹಾಬಾದ ತಾಲೂಕಿನಲ್ಲಿ ಶಹಾಬಾದ ತಹಶೀಲ್ದಾರ ಕಚೇರಿಯಲ್ಲಿ ಮತಗಟ್ಟೆ ಸ್ಥಾಪನೆ ಮಾಡಲಾಗಿದೆ.