ಪರಿಷತ್​ ಈಶಾನ್ಯ ಶಿಕ್ಷಕರ ಕ್ಷೇತ್ರ: ದಾಖಲೆಯ ಶೇ.86.97 ಮತದಾನ, ಶಿಕ್ಷಕರ ಉತ್ಸಾಹದ ಮತ

ಕಲಬುರಗಿಯಲ್ಲಿ ಮತದಾನಕ್ಕಾಗಿ ಸರತಿಯಲ್ಲಿ ನಿಂತ್ತಿರುವ ಶಿಕ್ಷಕರು, ಉಪನ್ಯಾಸಕರು.
ಕಲಬುರಗಿಯಲ್ಲಿ ಮತದಾನಕ್ಕಾಗಿ ಸರತಿಯಲ್ಲಿ ನಿಂತ್ತಿರುವ ಶಿಕ್ಷಕರು, ಉಪನ್ಯಾಸಕರು.
Published on: 

ಕಲಬುರಗಿ: ವಿಧಾನ ಪರಿಷತ್​ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ದಾಖಲೆಯ ಶೇ.86.97 ಮತದಾನವಾಗಿದ್ದು, ಶಿಕ್ಷಕರು, ಉಪನ್ಯಾಸಕರು ಅತ್ಯಂತ ಉತ್ಸಾಹದಿಂದ ಸರತಿ ಸಾಲಿನಲ್ಲಿ ನಿಂತು ಮತದಾನ ಶನಿವಾರ ಮಾಡಿದ್ದು, ಶಿಕ್ಷಕರ ಕ್ಷೇತ್ರದ ಪ್ರತಿನಿಧಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದ್ದು, ಅ.27ರಂದು ಫಲಿತಾಂಶ ಹೊರಬೀಳಲಿದೆ.

ಕ್ಷೇತ್ರದ ಏಳು ಜಿಲ್ಲೆಗಳಲ್ಲಿ ಅತ್ಯಂತ ಶಾಂತಿಯುತ ಮತದಾನವಾಗಿದ್ದು, ಮತಪ್ರಕ್ರಿಯೆ ವಿಳಂಬ, ಬ್ಯಾನರ್​ ಆಕ್ಷೇಪ ಸೇರಿ ಸಣ್ಣಪುಟ್ಟ ಘಟನೆ ಹೊರತುಪಡಿಸಿ ಯಾವುದೇ ವಿವಾದ, ಗದ್ದಲಗಳಾಗದೇ ಶನಿವಾರ ಚುನಾವಣೆ ನಡೆದಿದ್ದು, ಕಲಬುರಗಿ ಜಿಲ್ಲೆಯಲ್ಲಿ ದಾಖಲೆಯ ಮತದಾನವಾಗಿದ್ದು, ಭಾಗಶಃ ಎಲ್ಲ ಜಿಲ್ಲೆಗಳಲ್ಲೂ ಶಿಕ್ಷಕರ ಕ್ಷೇತ್ರದಿಂದ ಉತ್ತಮ ಸ್ಪಂದನೆ ದೊರಕಿದೆ.

ಬೆಳಗ್ಗೆ 8ಗಂಟೆಯಿಂದಲೇ ಶಿಕ್ಷಕರು ಸರತಿ ಸಾಲಿನಲ್ಲಿ ನಿಂತು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದರು. ಕಲಬುರಗಿ ಜಿಲ್ಲೆಯಲ್ಲಿ ಶೇ.84.37, ಬಳ್ಳಾರಿ ಶೇ.86.50, ಬೀದರ್​ ಶೇ.86.47, ರಾಯಚೂರು ಶೇ.86.04, ಕೊಪ್ಪಳ ಶೇ.92.59, ಯಾದಗಿರಿ ಶೇ.90.79, ವಿಜಯನಗರ ಶೇ.91.07 ಮತದಾನವಾಗಿದ್ದು, ಏಳು ಜಿಲ್ಲೆಗಳು ಸೇರಿ ಒಟ್ಟು ಶೇ.86.97 ದಾಖಲೆಯ ಮತದಾನವಾಗಿದ್ದು, ಕಳೆದ ಬಾರಿಯ (2020) ಶೇ.73 ಮತದಾನದ ದಾಖಲೆ ಹಿಮ್ಮೆಟ್ಟಿಸಲಾಯಿತು.

ಅಂತಿಮ ಹಂತದ ಕಸರತ್ತು: ವಿಧಾನ ಪರಿಷತ್​ ಚುನಾವಣೆ ಹಿನ್ನೆಲೆಯಲ್ಲಿ ತೀವ್ರ ಪೈಪೋಟಿ ನಡೆದಿದ್ದು, ಮತಗಟ್ಟೆಗಳ ಬಳಿ ಅಭ್ಯರ್ಥಿಗಳು ಅಂತಿಮ ಹಂತದ ಮತಯಾಚನೆ, ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದರು. ಖುದ್ದು ಅಭ್ಯರ್ಥಿಗಳೇ ಮತಗಟ್ಟೆಗಳತ್ತ ತಿರುಗಾಡಿ ವೀಕ್ಷಣೆ, ಪರಿಶೀಲನೆ ನಡೆಸಿದರು. ಮತಗಟ್ಟೆಗಳ ಸಮೀಪ ಕಾಂಗ್ರೆಸ್​, ಬಿಜೆಪಿಯ ಟೆಂಟ್​ಗಳನ್ನು ಹಾಕಿ ಮತದಾರರಿಗೆ ಅವರ ಮತಗುರುತಿನ ಸಂಖ್ಯೆಯನ್ನು ತಿಳಿಸಿ, ಮತ ನೀಡುವಂತೆ ಮನವರಿಕೆ ಮಾಡಿದರು. ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ, ಕಾಂಗ್ರೆಸ್​ ಅಭ್ಯರ್ಥಿ ಶರಣಪ್ಪ ಮಟ್ಟೂರ ಸೇರಿದಂತೆ ಪಕ್ಷೇತರ ಅಭ್ಯರ್ಥಿಗಳು ಮತಗಟ್ಟೆಗಳ ಬಳಿ ಕೊನೇ ಹಂತದ ಪ್ರಯತ್ನ ನಡೆಸಿದರು.

ಮತ ಹಾಕದೇ ವಾಪಸ್​ ಹೋದ ಶಿಕ್ಷಕರು : ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ (ಐಟಿಐ)ದ ಮತಗಟ್ಟೆಯಲ್ಲಿ ಬೆಳಗ್ಗೆಯಿಂದಲೇ ಸರತಿಯಲ್ಲಿ ಮತದಾರರೂ ನಿಂತರೂ ಮತಪ್ರಕ್ರಿಯೆ ವಿಳಂಬದಿಂದ ತೀವ್ರ ಸಮಸ್ಯೆ ಉಂಟಾಗಿ, ಹಲವು ಮತದಾರರು ವಾಪಸ್​ ಹೋದ ಟನೆ ನಡೆಯಿತು. ಮತಗಟ್ಟೆಯಲ್ಲಿ ಮತದಾರರು ಕನಿಷ್ಠ ಎರಡ್ಮೂರು ಗಂಟೆ ಸರತಿಯಲ್ಲಿ ನಿಂತ್ತ ಮಹಿಳಾ ಮತದಾರರು ಬೇಸತ್ತು ವಾಪಸ್​ ಹೋದರೆ, ಕೆಲವರು ಪೊಲೀಸರು, ಮತಗಟ್ಟೆ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸಿದರು.

ಸುಧಾರಣೆ ಮಾಡದೇ ಕೈಚೆಲ್ಲಿದ ಅಧಿಕಾರಿಗಳು: ಸರ್ಕಾರಿ ಐಟಿಐ ಕಾಲೇಜಿನ ಬಳಿ ಚುನಾವಣೆ ಸಮಸ್ಯೆ ಆಗುತ್ತಿದೆ ಎಂದು ಅಭ್ಯರ್ಥಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಕೋರಿಕೊಂಡರು. ಆದರೆ ಹೂಂಗುಟ್ಟಿದ ಜಿಲ್ಲಾಡಳಿತ, ಪೊಲೀಸರು ಅನಿವಾರ್ಯವಾಗಿ ಏನನ್ನು ಮಾಡದೇ ಕೈಚೆಲ್ಲಿ ಕುಳಿತರು. ಸರತಿಯಲ್ಲಿ ನಿಂತ್ತವರಿಗೆ ಕೊನೇಗೆ ಖುರ್ಚಿ, ನೀರಿನ ಬಾಟಲ್​ ವ್ಯವಸ್ಥೆ ಕಾಟಾಚಾರಕ್ಕೆ ಮಾಡಿ, ಕೈತೊಳೆದುಕೊಂಡರು.

ಐಟಿಐ ಕಾಲೇಜಿನ ಮತಗಟ್ಟೆಯಲ್ಲಿ ಚಿಕ್ಕ ಕೋಣೆ, ಸರತಿಯಲ್ಲಿ ನಿಲ್ಲುವ ಮಾರ್ಗ ಸಣ್ಣದಾಗಿದ್ದರಿಂದ ನೂರಾರು ಜನರು ಸರತಿ ನಿಂತ್ತಿದ್ದು, ಧೂಳು, ಗಾಳಿ ಇಲ್ಲದ್ದಕ್ಕೆ ಕೆಲವರಿಗೆ ಉಸಿರಾಟದ ತೊಂದರೆ, ಇನ್ನುವ ಕೆಲವರಿಗೆ ವಾಂತಿ ಸೇರಿ ಹಲವು ಸಮಸ್ಯೆ ಉಂಟಾಗಿ ಮತ ಹಾಕದೇ ವಾಪಸ್​ ಹೋದರು. ವಯಸ್ಕರಂತೂ ಪೊಲೀಸರ ಜತೆಗೆ ವಾಗ್ವಾದ ನಡೆಸಿ, ವಯಸ್ಸಾದರೂ ನೋಡಿ ಒಳಗೆ ಬಿಡಿ ಎಂದು ಕೋರಿದರು.

ಏರು ಗತಿಯಲ್ಲಿ ಮತದಾನ

ಬೆಳಗ್ಗೆ 10ಕ್ಕೆ - ಶೇ.13.51

ಮಧ್ಯಾಹ್ನ 12ಕ್ಕೆ - ಶೇ.43.16

ಮಧ್ಯಾಹ್ನ 2ಕ್ಕೆ - ಶೇ.69.83

ಸಂಜೆ 4ಕ್ಕೆ - ಶೇ.86.97

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net