ಹೊಸ ಕಾರ್ಮಿಕ ಕಾನೂನುಗಳು ಜಾರಿ

ಕಲಬುರಗಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಮಿಕ ಸಂಹಿತೆ ಕಾರ್ಯಾಗಾರವನ್ನು ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀನಿವಾಸ ನವಲೆ ಉದ್ಘಾಟಿಸಿದರು. ಡಾ.ವೆಂಕಟೇಶ ಶಿಂದಿಹಟ್ಟಿ, ಪಿ.ವಿಲಾಸಕುಮಾರ, ಮೊಹಮ್ಮದ್​ ಬಷೀರ್​ ಅನ್ಸಾರಿ, ಡಾ.ಅವಿನಾಶ ನಾಯ್ಕ, ನರಸಿಂಹ ಮೆಂಡನ್​ ಇತರರಿದ್ದರು.
ಕಲಬುರಗಿಯಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಮಿಕ ಸಂಹಿತೆ ಕಾರ್ಯಾಗಾರವನ್ನು ಹಿರಿಯ ಸಿವಿಲ್​ ನ್ಯಾಯಾಧೀಶ ಶ್ರೀನಿವಾಸ ನವಲೆ ಉದ್ಘಾಟಿಸಿದರು. ಡಾ.ವೆಂಕಟೇಶ ಶಿಂದಿಹಟ್ಟಿ, ಪಿ.ವಿಲಾಸಕುಮಾರ, ಮೊಹಮ್ಮದ್​ ಬಷೀರ್​ ಅನ್ಸಾರಿ, ಡಾ.ಅವಿನಾಶ ನಾಯ್ಕ, ನರಸಿಂಹ ಮೆಂಡನ್​ ಇತರರಿದ್ದರು.
Published on: 

ಕಲಬುರಗಿ: ಕಾನೂನಿನಲ್ಲಿ ಈ ಹಿಂದೆ ಕಾರ್ಮಿಕರ ಹಲವಾರು ಕಾಯ್ದೆಗಳಿದ್ದವು. ಆದರೆ 2024ರಲ್ಲಿ ಅವುಗಳಲ್ಲಿ ಬದಲಾವಣೆ ತಂದು ಮೂರು ಹೊಸ ಕಾನೂನು ಜಾರಿಗೆ ತರಲಾಗಿದೆ ಎಂದು ಹಿರಿಯ ಸಿವಿಲ್​ ನ್ಯಾಯಾಧೀಶರಾದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.

ಪ್ರಾದೇಶಿಕ ವ್ಯಾಪ್ತಿಯ ಕಲಬುರಗಿ, ಬೀದರ್​, ರಾಯಚೂರು, ಯಾದಗಿರಿ, ಕೊಪ್ಪಳ, ವಿಜಯನಗರ, ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆ ಕಾರ್ಮಿಕ ಇಲಾಖೆ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು ಹಾಗೂ ಸಿಬ್ಬಂದಿಗೆ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆ ಸೋಮವಾರ ಆಯೋಜಿಸಿದ್ದ ಕಾರ್ಮಿಕ ಸಂಹಿತೆ ಕುರಿತ ಎರಡು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಐಪಿಸಿ, ಸಿಆರ್​ಪಿಸಿ ಇತರ ಕಾಯ್ದೆಗಳ ಬದಲಿಗೆ ಭಾರತೀಯ ದಂಡ ಸಂಹಿತೆ, ಭಾರತೀಯ ನಾಗರಿಕ ಸಂಹಿತೆ ಮತ್ತು ಭಾರತೀಯ ಸಾಕ್ಷ್ಮ ಕಾಯ್ದೆ ಜಾರಿಗೆ ತರಲಾಗಿದ್ದು, ಕಾರ್ಮಿಕರ ಹಳೆಯ ಕಾಯ್ದೆಯಲ್ಲಿದ್ದ 511 ಸೆಕ್ಷನ್​ಗಳನ್ನು 358ಕ್ಕಿಳಿಸಲಾಗಿದೆ. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಅವರ ಹಕ್ಕುಗಳ ಸಂರಕ್ಷಣೆ ಜತೆ ಯಾವುದೇ ಅನಗತ್ಯ ತೊಂದರೆ ಆಗದಂತೆ ಕಾನೂನುಗಳ ಮೂಲ ಉದ್ದೇಶ ಸರಿಯಾಗಿ ಅರ್ಥ ಮಾಡಿಕೊಂಡು ಜಾರಿಗೆ ತಂದಿರುವುದು ಇದರ ಮುಖ್ಯ ಉದ್ದೇಶ ಎಂದರು.

ಪ್ರಾದೇಶಿಕ ಉಪ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ ಶಿಂದಿಹಟ್ಟಿ ಪ್ರಾಸ್ತಾವಿಕ ಮಾತನಾಡಿ, ಕೇಂದ್ರ ಸರ್ಕಾರ ಹಳೆಯ ಕಾನೂನು ಸರಳೀಕರಿಸಿ ಸಮಿತಿಗಳ ರೂಪದಲ್ಲಿ ಹೊಸ ಕಾರ್ಮಿಕ ಸಂಹಿತೆ ಜಾರಿಗೊಳಿಸುತ್ತಿದೆ. ವೇತನ ಕೋಡ್​, ಸಾಮಾಜಿಕ ಭದ್ರತಾ ಕೋಡ್​, ಔದ್ಯೋಗಿಕ ಸುರಕ್ಷತೆ ಹಾಗೂ ಕೈಗಾರಿಕಾ ಸಂಬಂಧಗಳ ಕೋಡ್​ ಎಂಬ ನಾಲ್ಕು ಪ್ರಮುಖ ಕೋಡ್​ ಜಾರಿಗೆ ತರಲಾಗಿದೆ. ದೇಶದ ನೂರಕ್ಕೂ ಹೆಚ್ಚು ಕಾರ್ಮಿಕ ಕಾನೂನು ಕ್ರೋಢಿಕರಿಸಿ ಅಸಂಟಿತ ವಲಯದ ಕಾರ್ಮಿಕರಿಗೂ ಸಾಮಾಜಿಕ ಭದ್ರತೆ ಮತ್ತು ಸೌಲಭ್ಯ ಕಲ್ಪಿಸುವುದು ಇದರ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಕಲಬುರಗಿ ಹೈಕೋರ್ಟ್​ ಹಿರಿಯ ನ್ಯಾಯವಾದಿ ಪಿ. ವಿಲಾಸಕುಮಾರ ಮಾತನಾಡಿ, ಹೈಕೋರ್ಟ್​ ಮತ್ತು ಜಿಲ್ಲಾ ಕೋರ್ಟ್​ಗಳಲ್ಲಿ ಪ್ರಾದೇಶಿಕ ಭಾಷೆ ಕನ್ನಡ ಬಳಸಬೇಕು. ಮಾತನಾಡುವಾಗಲೂ ಮಾತೃಭಾಷೆಗೆ ಆದ್ಯತೆ ನೀಡಬೇಕು. ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಪ್ರಕರಣಗಳಿಗೆ ಕಾರ್ಮಿಕ ಕಾನೂನುಗಳ ಬಗ್ಗೆ ಸರಿಯಾದ ಪರಿಜ್ಞಾನವಿರುವ ನ್ಯಾಯಾಧೀಶರ ಅಗತ್ಯವಿದೆ ಎಂದರು.

ಕಾರ್ಮಿಕ ನ್ಯಾಯಾಲಯಗಳ ಕೊರತೆ ಹಾಗೂ ಅಕ್ರಮ ನೇಮಕದಲ್ಲಿನ ಗೊಂದಲ ಮತ್ತು ಅರ್ಹತಾ ಮಾನದಂಡ ಕುರಿತು ವಿವರಿಸಿದ ಅವರು, ಉಮಾದೇವಿ ಪ್ರಕರಣದ ತೀರ್ಪು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ. ಕಾನೂನುಬದ್ಧವಾಗಿ ನೇಮಕಗೊಂಡ ನೌಕರರ ಹಿತಾಸಕ್ತಿ ಕಾಪಾಡುವುದು ಮುಖ್ಯ. ಜಿಲ್ಲೆಗಳಲ್ಲಿ ಕಾರ್ಮಿಕ ನ್ಯಾಯಾಲಯ (ಲೇಬರ್​ ಕೋರ್ಟ್​) ಇಲ್ಲದಿರುವ ಕಡೆ ಸ್ಥಾಪಿಸುವುದು, ಎಲ್ಲರಿಗೂ ಸುಲಭವಾಗಿ ನ್ಯಾಯ ದೊರೆಯುವಂತೆ ಮಾಡುವುದು ಮತ್ತು ಸಂವಿಧಾನದಡಿ ಕಾರ್ಮಿಕರಿಗೆ ಮೂಲಭೂತ ಹಕ್ಕು ಮತ್ತು ಅನುಷ್ಠಾನದ ಪ್ರಾಮುಖ್ಯದ ಬಗ್ಗೆ ತಿಳಿಸಿದರು.

ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮೊಹಮ್ಮದ್​ ಬಷೀರ್​ ಅನ್ಸಾರಿ, ದಾವಣಗೆರೆ ವಿಭಾಗದ ಸಹಾಯಕ ಆಯುಕ್ತ ಡಾ.ಅವಿನಾಶ ನಾಯ್ಕ, ಕಲಬುರಗಿ ಹೋಟೆಲ್​ ಮಾಲೀಕರ ಸಂದ ಅಧ್ಯಕ್ಷ ನರಸಿಂಹ ಮೆಂಡನ್​, ಕಲಬುರಗಿ ಕಟ್ಟಡ ಕಾರ್ಮಿಕರ ಜಂಟಿ ಸಮನ್ವಯ ಸಮಿತಿ ಅಧ್ಯಕ್ಷ ಪ್ರಭು ಯಳಸಂಗಿ, ಕಲಬುರಗಿ ಸಿಐಟಿಯು ಅಧ್ಯಕ್ಷ ಶ್ರೀಮಂತ ಜಮಾದಾರ ಇತರರಿದ್ದರು.

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ನಿರ್ದೇಶಕ ಸಂತೋಷ ಕುಲಕರ್ಣಿ ನಿರೂಪಣೆ ಮಾಡಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಶರಣಪ್ಪ ಹಳಿಮನಿ ಸ್ವಾಗತಿಸಿದರು. ಹಿರಿಯ ಕಾರ್ಮಿಕ ನಿರ್ದೇಶಕ ರವೀಂದ್ರ ಬಲ್ಲೂರ ವಂದಿಸಿದರು.

ಹೊಸ ಕಾಯ್ದೆ ಮತ್ತು ತಿದ್ದುಪಡಿಗಳ ಬಗ್ಗೆ ವಕೀಲರು ಹಾಗೂ ನ್ಯಾಯಾಧೀಶರು ಸಂಪೂರ್ಣ ಅರಿತು ಸರಿಯಾದ ಅರ್ಥ ವಿವರಣೆ ನೀಡಬೇಕು. ಯಾವುದೇ ಕಾನೂನು ತಂದಾಗ ಅದು ಸಂವಿಧಾನದ ಆಶಯ ಮತ್ತು ಕಾರ್ಮಿಕರ ಹಕ್ಕುಗಳಿಗೆ ಅನುಗುಣವಾಗಿರಬೇಕು. ಕೇವಲ ಕಾನೂನು ಜಾರಿಗೆ ತಂದರೆ ಸಾಲದು, ಅದರ ಹಿಂದಿನ ಉದ್ದೇಶ ಮತ್ತು ಸರಿಯಾದ ಅರ್ಥ ಎಲ್ಲರೂ ತಿಳಿದುಕೊಳ್ಳಬೇಕು.
> ಶ್ರೀನಿವಾಸ ನವಲೆ ಹಿರಿಯ ಸಿವಿಲ್​ ನ್ಯಾಯಾಧೀಶ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net