ನಾವೀನ್ಯ ಬೋಧನೆಗೆ ಅಪ್‌ಡೇಟ್ ಆಗಿ

ಗುಲ್ಬರ್ಗ ವಿವಿ ಮಂಥನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ. ಶಶಿಕಾಂತ್ ಉಡಿಕೇರಿ ಮಾತನಾಡಿದರು. ಪ್ರೊ.ಎಚ್.ಟಿ.ಪೋತೆ, ಡಾ.ಎನ್.ಜಿ.ಕಣ್ಣೂರ್ ಇತರರಿದ್ದರು.
ಗುಲ್ಬರ್ಗ ವಿವಿ ಮಂಥನ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಕುಲಪತಿ ಪ್ರೊ. ಶಶಿಕಾಂತ್ ಉಡಿಕೇರಿ ಮಾತನಾಡಿದರು. ಪ್ರೊ.ಎಚ್.ಟಿ.ಪೋತೆ, ಡಾ.ಎನ್.ಜಿ.ಕಣ್ಣೂರ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುಲ್ಬರ್ಗ ವಿವಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹೇಳಿಕೆ
  • ಗುಲ್ಬರ್ಗ ವಿವಿ ಕಾರ್ಯಾಗಾರ ಸಮಾರೋಪ
ಕಲಬುರಗಿ: ಹೊಸ ವಿಷಯಗಳಿಗೆ ಶಿಕ್ಷಕ ಸಮೂಹ ಅಪ್‌ಡೇಟ್ ಆಗಬೇಕು. ಜ್ಞಾನ ಮತ್ತು ಕಲಿಕೆ ಯಾರೊಬ್ಬರ ಸ್ವತ್ತಲ್ಲ. ಬೋಧನೆಯಲ್ಲಿ ಹೊಸತನ, ವೈಜ್ಞಾನಿಕ ವಿಷಯ, ನಾವೀನ್ಯ ವಿಧಾನ ಅಳವಡಿಕೆಯೊಂದಿಗೆ ಉತ್ಕೃಷ್ಟ ಜ್ಞಾನಶಕ್ತಿ ಗಳಿಸಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ್ ಉಡಿಕೇರಿ ಹೇಳಿದರು.
ವಿಶ್ವವಿದ್ಯಾಲಯದ ಮಂಥನ ಸಭಾಂಗಣದಲ್ಲಿ ರೂಸಾ/ಪಿಎಂ-ಉಷಾ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ, ಗುಲ್ಬರ್ಗ ವಿಶ್ವವಿದ್ಯಾಲಯ ಹಾಗೂ ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಮತ್ತು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಸಹಯೋಗದೊಂದಿಗೆ ಬುಧವಾರ ಆಯೋಜಿಸಿದ್ದ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂ (ಎಫ್‌ಡಿಪಿ) ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ನವೀನ ಬೋಧನಾ ತಂತ್ರಗಳು ಮತ್ತು ಪಠ್ಯಕ್ರಮ ಚೌಕಟ್ಟು ಕಾರ್ಯಕ್ರಮದ ಸಮಾರೋಪದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಉನ್ನತ ಶಿಕ್ಷಣ ಬೋಧನೆ ಮತ್ತು ಪಠ್ಯ ವಿಷಯಗಳಲ್ಲಿ ಪ್ರಾಯೋಗಿಕ ಜ್ಞಾನ ಅವಶ್ಯಕ. ಪಠ್ಯ ವಿಷಯಗಳನ್ನು ತಂತ್ರಜ್ಞಾನ ಬಳಕೆಯೊಂದಿಗೆ ಶಿಕ್ಷಕರು ಉತ್ಕೃಷ್ಟ ಬೋಧನೆಯಲ್ಲಿ ಶಕ್ತಿಯಾಗಬೇಕು. ವಿದ್ಯಾರ್ಥಿಗಳ ಜ್ಞಾನ ಮಟ್ಟ ಅರಿತು ಕಲಿಸುವುದು ಅಗತ್ಯ. ಅವಶ್ಯಕತೆ ಮತ್ತು ಅವಕಾಶಗಳಿಗೆ ಅನುಗುಣವಾಗಿ ಕಲಿಸುವ ಆಸಕ್ತಿಯನ್ನು ಬೋಧಕರು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಹಾಗೂ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ ಮಾತನಾಡಿ, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಸಾಂಪ್ರದಾಯಿಕ ಕಲಿಕೆಗಿಂತ ಬೋಧನೆಯಲ್ಲಿ ನಾವೀನ್ಯತೆ ಮತ್ತು ಸೃಜನಶೀಲತೆಗೆ ಒತ್ತು ನೀಡಬೇಕು. ವಿದ್ಯಾರ್ಥಿ ಕೇಂದ್ರಿತ ಬೋಧನೆಯಿಂದ ವಿದ್ಯಾರ್ಥಿಗಳನ್ನು ನೈಜ ಪ್ರಪಂಚದ ಕಡೆಗೆ ಸೆಳೆಯಬೇಕಿದೆ. ವೈಜ್ಞಾನಿಕ ಮನೋಭಾವನೆ ಮತ್ತು ಉದ್ಯೋಗಾರ್ಹ ಕೌಶಲ ಬೆಳೆಸಿ ಉನ್ನತ ಗುರಿ ಸಾಧನೆಗೆ ಸಿದ್ದಗೊಳಿಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದರು.
ಬೋಧನೆಯಲ್ಲಿ ತಂತ್ರಜ್ಞಾನ ಬಳಸುವುದು ಒಂದು ಭಾಗ. ಆದರೆ, ತಂತ್ರಜ್ಞಾನದಿAದ ಸೃಜನಶೀಲತೆ ಮಾಯವಾಗಬಾರದು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸತ್ಯ, ನಿಖರ ಮತ್ತು ಆಧಾರವಾಗಿರುವ ಪುಸ್ತಕ ಮತ್ತು ಗ್ರಂಥ ಕೇಂದ್ರಿತ ವಿಚಾರಗಳ ಕಡೆಗೆ ಆಕರ್ಷಣೆ ಬೆಳೆಸಿಕೊಳ್ಳಬೇಕು. ವಿನೂತನ ಬೋಧನೆ ಶೈಲಿಯಿಂದ ವಾಸ್ತವ ಜಗತ್ತು, ವೈಚಾರಿಕ ಚಿಂತನೆ ಮತ್ತು ವೈಜ್ಞಾನಿಕ ಅರಿವಿನ ಪ್ರಪಂಚ ಪ್ರವೇಶಿಸುವ ಮೂಲಕ ಬದುಕು ರೂಪಿಸಿಕೊಳ್ಳಬೇಕು ಎಂದರು.
ಹೊಸದನ್ನು ಓದಿದಾಗ ಮಾತ್ರ ಹೊಸದನ್ನು ಕಲಿಸಲು ಸಾಧ್ಯ. ನಾವೀನ್ಯ ಬೋಧನಾ ಕೌಶಲ್ಯದಿಂದ ಸೃಜನಶೀತೆ, ಕ್ರಿಯಾಶೀಲತೆ ಮತ್ತು ವಿನೂತನ ಆಲೋಚನೆಗೆ ಮಹತ್ವ ನೀಡಬೇಕು. ಸಂವಹನ, ಸಂವೇದನೆ, ಸಂವಾದಾತ್ಮಕ, ಚರ್ಚೆಗಳು ನಡೆಯಬೇಕು ಎಂದರು.
ಮೌಲ್ಯಮಾಪನ ಕುಲಸಚಿವ ಪ್ರೊ.ಎನ್.ಜಿ.ಕಣ್ಣೂರು ಇದ್ದರು. ಅನ್ವಯಿಕ ವಿದ್ಯುನ್ಮಾನ ವಿಭಾಗದ ಹಿರಿಯ ಪ್ರಾಧ್ಯಾಪಕ ಹಾಗೂ ಕಾರ್ಯಕ್ರಮ ಸಂಯೋಜಕ ಪ್ರೊ.ಆರ್.ಎಲ್.ರಾಯಭಾಗಕರ್ ಸ್ವಾಗತಿಸಿದರು. ಡಾ.ಮಂಜುರ ಅಹ್ಮದ್ ದಖ್ಖಾನಿ, ಡಾ.ಮಂಜುಳ ಬೋವಿ, ಡಾ.ಅನಿಲ್‌ಕುಮಾರ್ ಹಾಲು, ಡಾ.ಸಾವಿತ್ರಿ ಹಾಗೂ ಡಾ.ಹನುಮಂತರಾಯ ರಾಂಪೂರೆ ಅನಿಸಿಕೆ ವ್ಯಕ್ತಪಡಿಸಿದರು. ರೂಸಾ-ಪಿಎಂ ಉಷಾ ನೋಡಲ್ ಅಧಿಕಾರಿ ಡಾ. ವಿದ್ಯಾಧರ ಮೇಲಕೇರಿ ಎರಡು ದಿನಗಳ ಕಾರ್ಯಕ್ರಮ ಮತ್ತು ಗೋಷ್ಠಿ ವರದಿ ಮಂಡಿಸಿ, ವಂದಿಸಿದರು.
ಮ್ಯಾಜಿಕ್ ಬಸ್ ಇಂಡಿಯಾ ತರಬೇತಿ ಅಧಿಕಾರಿ ಜೋಶುವಾ ಡೇನಿಯಲ್, ಜೆಕಾರ್ತಿಕೇಯ ತರಬೇತಿ ಸಲಹಾ ಸಂಸ್ಥೆಯ ಸಿಇಓ ಡಾ.ಅಭಯ್ ಸರ್ದೇಶ್‌ಪಾಂಡೆ, ರಿಲಯನ್ಸ್ ಫೌಂಡೇಶನ್ ಸ್ಕಿಲ್ಲಿಂಗ್ ಅಕಾಡೆಮಿ ಸದಸ್ಯರಾದ ರೇಖಾ ಕುಮಾರಿ, ಜಾಬೆಜ್, ಫೌಜಿತ್ ಇದ್ದರು. ಉಪನ್ಯಾಸಕ ಡಾ. ಎಂ. ಬಿ. ಕಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
"

ಯಾಂತ್ರಿಕತೆ ಮತ್ತು ತಾಂತ್ರಿಕ ಕೌಶಲದ ಜತೆಗೆ ಸೃಜನಶೀಲ ಬೋಧನಾ ಕಲೆಯನ್ನು ಅಧ್ಯಾಪಕರು ರೂಢಿಸಿಕೊಳ್ಳಬೇಕು. ಹೊಸ ಜ್ಞಾನದಿಂದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಂಚಿತರಾಗಬಾರದು. ಓದು, ಬರೆದು ಬೋಧನೆ ಮಾಡಬೇಕು. ಹೊಸ ವಿಚಾರ ಕೇಂದ್ರಿತ ಅಧ್ಯಯನ, ಬೋಧನೆ ಮತ್ತು ಪ್ರಾತ್ಯಕ್ಷಿಕೆ ತುಂಬಾ ಮುಖ್ಯ.

ಪ್ರೊ.ಎಚ್.ಟಿ.ಪೋತೆಡೀನರು, ಕಲಾ ನಿಕಾಯ, ಗುಲ್ಬರ್ಗ ವಿವಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net