ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಲಿ

ಕಲಬುರಗಿಯಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅಧ್ಯಕ್ಷತೆಯ ಗೃಹಲಕ್ಷ್ಮಿ ಯೋಜನೆ ಅರ್ಜಿ ಮರು ಪರಿಶೀಲನಾ ಸಭೆಯಲ್ಲಿ ರಾಹುಲ್​ ಸಂಕನೂರ, ಚಂದ್ರಿಕಾ ಪರಮೇಶ್ವರ, ಡಾ.ಶರಣಬಸಪ್ಪ ಕ್ಯಾತನಾಳ ಇತರರಿದ್ದರು.
ಕಲಬುರಗಿಯಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಅಧ್ಯಕ್ಷತೆಯ ಗೃಹಲಕ್ಷ್ಮಿ ಯೋಜನೆ ಅರ್ಜಿ ಮರು ಪರಿಶೀಲನಾ ಸಭೆಯಲ್ಲಿ ರಾಹುಲ್​ ಸಂಕನೂರ, ಚಂದ್ರಿಕಾ ಪರಮೇಶ್ವರ, ಡಾ.ಶರಣಬಸಪ್ಪ ಕ್ಯಾತನಾಳ ಇತರರಿದ್ದರು.
Published on: 

ಕಲಬುರಗಿ: ಗೃಹಲಕ್ಷ್ಮಿ ಯೋಜನೆ ಸೌಲಭ್ಯ ಜಿಲ್ಲೆಯ ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪಬೇಕು. ತಾಂತ್ರಿಕ ಕಾರಣ, ಆಧಾರ್​ ಲಿಂಕ್​ ಅಥವಾ ದಾಖಲೆಗಳ ಸಣ್ಣಪುಟ್ಟ ಲೋಪಗಳಿಂದಾಗಿ ಯಾವೊಬ್ಬ ಅರ್ಹ ಮಹಿಳೆ ಯೋಜನೆಯಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ತಾಕೀತು ಮಾಡಿದರು.

ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಡಿ ಮಂಗಳವಾರ ಕರೆದಿದ್ದ ಗೃಹಲಕ್ಷ್ಮಿ ಯೋಜನೆ ಅರ್ಜಿ ಮರು ಪರಿಶೀಲನಾ ಸಭೆಯಲ್ಲಿ ಪ್ರಸ್ತುತ ಸ್ಥಿತಿಗತಿ ಕುರಿತು ವಿಸ್ತೃತ ಚರ್ಚೆ ನಡೆಯಿತು.

ಜಿಲ್ಲೆಯಲ್ಲಿ ಸದ್ಯ 5.97 ಲಕ್ಷ ಫಲಾನುಭವಿಗಳು ನೋಂದಾಯಿಸಿದ್ದು, ಕಳೆದ 36 ತಿಂಗಳಲ್ಲಿ ಜಿಲ್ಲೆಗೆ ಪ್ರತಿ ತಿಂಗಳು ಸುಮಾರು 120 ಕೋಟಿಯಂತೆ 4000 ಕೋಟಿಗೂ ಅಧಿಕ ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಜಮೆಯಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಜಂಟಿ ತಂಡ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೆ ತೆರಳಿ ಫಲಾನುಭವಿಗಳ ನೈಜತೆ ತಪಾಸಣೆ ನಡೆಸುವರು. ಮರಣ ಹೊಂದಿದ ಪ್ರಕರಣಗಳಲ್ಲಿ ಕುಟುಂಬಕ್ಕೆ ಬೇರೆ ಯಾವುದೇ ಜೀವನೋಪಾಯದ ಆದಾಯವಿಲ್ಲದಿದ್ದರೆ ಅಂತಹ ಅರ್ಜಿ ನಿಯಮಾನುಸಾರ ವಿಶೇಷವಾಗಿ ಮರು ಪರಿಶೀಲಿಸಿ ಅರ್ಹರಿಗೆ ನೆರವು ನೀಡಲು ಸಭೆ ನಿರ್ಧರಿಸಿತು.

ಆಧಾರ್​ ಆಧಾರಿತ ಫೇಸ್​ ರೆಕಗ್ನಿಷನ್​ ಮತ್ತು ಜಿಪಿಎಸ್​ ಮ್ಯಾಪಿಂಗ್​ ತಂತ್ರಜ್ಞಾನ ಹೊಂದಿರುವ ಮೊಬೈಲ್​ ಆ್ಯಪ್​ ಬಳಸಿ ಸ್ಥಳದಲ್ಲೇ ದಾಖಲೆಗಳ ತಪಾಸಣೆ ಮಾಡಲಾಗುತ್ತದೆ. ಕೆಲ ದಿನಗಳಲ್ಲಿ ಈ ಆ್ಯಪ್​ ಪ್ರಾರಂಭಿಸಲಾವುದು ಎಂದು ಅಧಿಕಾರಿಗಳು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಪಂ ವ್ಯಾಪ್ತಿಯ ಇಲಾಖಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಕಾಲಮಿತಿಯೊಳಗೆ ಮರು ಪರಿಶೀಲನೆ ಪೂರ್ಣಗೊಳಿಸಬೇಕು ಎಂದು ಡಿಸಿ ನಿರ್ದೇಶನ ನೀಡಿದರು.

ಜಿಪಂ ಸಿಇಒ ರಾಹುಲ್​ ಸಂಕನೂರ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯೆ ಚಂದ್ರಿಕಾ ಪರಮೇಶ್ವರ, ಡಿಎಚ್​ಒ ಡಾ.ಶರಣಬಸಪ್ಪ ಕ್ಯಾತನಾಳ ಇತರರಿದ್ದರು.

ನಿಯಮಾವಳಿ ಉಲ್ಲಂಘಸಿ ಸೌಲಭ್ಯ ಪಡೆಯುತ್ತಿರುವ ಅನರ್ಹರನ್ನು ತಡೆದು ಪಾರದರ್ಶಕತೆ ಕಾಯ್ದುಕೊಳ್ಳಲು ಅಧಿಕಾರಿಗಳು ಮನೆ ಮನೆ ಭೇಟಿ ನೀಡಿ ಅರ್ಜಿಗಳ ಮರು ಪರಿಶೀಲನೆ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕು.
> ಇಕ್ರಮ್​ ಶರೀಫ್​ ಜಿಲ್ಲಾಧಿಕಾರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net