

ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಗೆ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದು, ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ 6204 ಮತ ಪಡೆದು ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಅವರಿಗಿಂತ ಸುಮಾರು 1000 ಮತಗಳ ಅಂತರದ ಮುನ್ನಡೆ ಸಾಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಮತ್ತು ಬಿಜೆಪಿ ಅಭ್ಯರ್ಥಿ ಶಶೀಲ ನಮೋಶಿ ಮಧ್ಯೆ ನೇರ ಪೈಪೋಟಿ ನಡೆದಿದೆ. ಪಕ್ಷೇತರ ಅಭ್ಯರ್ಥಿಗಳು ಒಂದಿಷ್ಟು ಮತ ಪಡೆದಿದ್ದು, ರಾಷ್ಟ್ರೀಯ ಪಕ್ಷದ ಇಬ್ಬರೂ ಅಭ್ಯರ್ಥಿಗಳಿಗೆ ತಲೆಬಿಸಿ ಆಗಿದೆ.
ಅ.23ರಂದು ನಡೆದ ಮತದಾನದಲ್ಲಿ ಒಟ್ಟು 30,250 ಮತ ಚಲಾವಣೆ ಆಗಿದ್ದವು. 14 ಟೇಬಲ್ ಅಳವಡಿಸಿ, ಪ್ರತಿ ಟೇಬಲ್ ನಲ್ಲಿ ಒಂದು ಸುತ್ತಿನಲ್ಲಿ 1000 ಮತ ಅಂದರೆ ಒಟ್ಟು 14,000 ಸಾವಿರ ಮತಗಳ ಎಣಿಕೆ ಮಾಡಲಾಗುತ್ತದೆ.
ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ., ಚುನಾವಣಾಧಿಕಾರಿ ಜಹೀರಾ ನಸೀಮ್, ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್ಗಳ ಸಮ್ಮುಖದಲ್ಲಿ ಸ್ಟ್ರಾಂಗ್ರೂಂ ತೆರೆಯಲಾಯಿತು. ಬಳಿಕ 144 ಮತಪೆಟ್ಟಿಗೆಗಳನ್ನು ತೆರೆದು ಮತಪತ್ರಗಳನ್ನು ಬಂಡ್ಲಿಂಗ್ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಮತಪತ್ರಗಳ ಬಂಡ್ಲಿಂಗ್ ಪೂರ್ಣಗೊಂಡ ಬಳಿಕ ಬ್ಯಾರೆಲ್ನಲ್ಲಿ ರ್ಯಾಂಡಮೈಜೇಷನ್ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆ ಮುಗಿದ ನಂತರ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಆರಂಭವಾಯಿತು.
ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್ನಿಂದ ಶರಣಪ್ಪ ಮಟ್ಟೂರ, ಬಿಜೆಪಿಯಿಂದ ಶಶೀಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷದಿಂದ ಸಾಯಬಣ್ಣಾ ಹಾಗೂ ಜನತಾ ದಳ (ಸಂಯುಕ್ತ) ಪಕ್ಷದಿಂದ ಶಂಕರೆಡ್ಡಿ ಪಾಟೀಲ್ ಪ್ರಮುಖ ಅಭ್ಯರ್ಥಿಗಳಾಗಿದ್ದಾರೆ.