

ಕಲಬುರಗಿ: ನವೆಂಬರ್ನಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ವಜ್ರ ಮಹೋತ್ಸವ ಉದ್ಘಾಟನೆಗೆ ಆಗಮಿಸುವಂತೆ ಎಐಸಿಸಿ ಅಧ್ಯರಾದ ರಾಜ್ಯಸಭೆ ವಿಪ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೆಹಲಿಯಲ್ಲಿ ಸೋಮವಾರ ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಮತ್ತು ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ ನೇತೃತ್ವದ ನಿಯೋಗ ಆಹ್ವಾನ ನೀಡಿದೆ. ಕೆಕೆಸಿಸಿಐ 60 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನ.28ರಿಂದ ಮೂರು ದಿನ ಕಲಬುರಗಿಯಲ್ಲಿ ವಜ್ರ ಮಹೋತ್ಸವ ಹಮ್ಮಿಕೊಂಡಿದ್ದು, ಕೈಗಾರಿಕಾ ವಸ್ತು ಪ್ರದರ್ಶನ, ರಾಜ್ಯ ಮಟ್ಟದ ಸಮ್ಮೇಳನ, ಉದ್ಯೋಗ ಸೇತು, ಉದ್ಯೋಗ ಮೇಳ ಹಾಗೂ ಕೆಕೆಸಿಸಿಐ ಸಂಸ್ಥಾಪಕರ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರಮಟ್ಟದಲ್ಲಿ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿರುವ ನೀವು ತವರೂರಲ್ಲಿ ನಡೆಯುವ ಈ ಕಾರ್ಯಕ್ರಮದ ಉದ್ಘಾಟನೆಗೆ ಆಗಮಿಸುವುದು ಸಂಸ್ಥೆಗೆ ಗೌರವದ ಸಂಗತಿ. ನಿಮ್ಮ ಉಪಸ್ಥಿತಿ ಈ ಭಾಗದ ವ್ಯಾಪಾರಸ್ಥರು ಹಾಗೂ ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹ ನೀಡಲಿದೆ ಎಂದು ನಿಯೋಗ ತಿಳಿಸಿ ಆಗಮಿಸುವಂತೆ ಕೋರಿತು. ರಾಜ್ಯಸಭೆ ಹಿರಿಯ ಸದಸ್ಯ ಜೈರಾಮ್ ರಮೇಶ ಇದ್ದರು.