

ಔರಾದ್: ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳನ್ನು ಅಡಗಿದ್ದು, ಶರಣರ ಪ್ರಾಣವೇ ವಚನ ಸಾಹಿತ್ಯದಲ್ಲಿದೆ, ವಚನಗಳನ್ನು ಓದುವ ಜತೆಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಶ್ರೀ ಚನ್ನಬಸವಾನಂದ ಸ್ವಾಮಿಜಿ ನುಡಿದರು.
ತಾಲೂಕಿನ ಮುಸ್ತಾಪುರದಲ್ಲಿ ಶನಿವಾರ ಆಯೋಜಿಸಿದ್ದ ಚಿನ್ಮಯ ಜ್ಞಾನಿ ಚೆನ್ನಬಸವಣ್ಣ ಜಯಂತಿ ಹಾಗೂ ಶರಣೆ ಧೂಪದ ಗೂಗ್ಗವ್ವೆ ಸ್ಮರಣೋತ್ಸವ ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಪೂಜ್ಯರು, ಬಸವೇಶ್ವರರು 12ನೇ ಶತಮಾನದಲ್ಲಿ ಕೈಗೊಂಡ ಸಾಮಾಜಿಕ ಚಿಂತನೆ, ವಿಚಾರಗಳು ಇಂದಿನ ಆಧುನಿಕ ನಾಗರಿಕ ಸಮಾಜಕ್ಕೆ ಮಾದರಿ ಎಂದರು.
ಯಾದಗಿರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಹೇಶ ಬಿರಾದಾರ್ ಷಟಸ್ಥಲ ಧ್ವಜಾರೋಹಣ ನೇರವೇರಿಸಿ ಮಾತನಾಡಿ, ಯುವ ಪೀಳಿಗೆ ಶರಣರ ಜೀವನದ ಆದರ್ಶಗಳನ್ನು ಅರಿತುಕೊಳ್ಳಲು ಉತ್ತಮವಾದ ವಚನ ಅಧ್ಯಯನ ಕೇಂದ್ರ ಸ್ಥಾಪನೆಯಾಗಬೇಕು ಎಂದರು.
ಮುಖಂಡ ರತಿಕಾಂತ ಮೇತ್ರೆ ಮಾತನಾಡಿದರು. ಮಾತೆ ಸತ್ಯಾದೇವಿ, ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ, ಶಿವಕುಮಾರ ಘಾಟೆ, ವಕೀಲ ಅಶೋಕ ಮಾನೂರೆ, ಶಿವಶರಣಪ್ಪ ಪಾಟೀಲ, ಗಣಪತಿ ಬಿರಾದಾರ್, ಶರಣಪ್ಪ ನಾಗಲಗಿದ್ದೆ, ಪ್ರಕಾಶ ದೇಶಮುಖ, ಧಮೇಂದ್ರ ಪೂಜಾರಿ, ಬಸವಣ್ಣೆಪ್ಪ ಕಾರಮುಂಗೆ ಇತರರಿದ್ದರು.