

ಚಿಂಚೋಳಿ: ವಿಬಿ-ಜಿ ರಾಮ್ಜಿ ಯೋಜನೆಯಡಿ ಕೂಲಿ ಕಾರ್ಮಿಕರ ಮಕ್ಕಳ ಆರೈಕೆಗಾಗಿ ರಾಜ್ಯ ಸರ್ಕಾರ ಜಾರಿಗೆ ತಂದ ಕೂಸಿನ ಮನೆ ಯೋಜನೆ ತಾಲೂಕಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಹಳಿ ತಪ್ಪಿದೆ. ಹಲವು ತಿಂಗಳಿಂದ ಕೂಸಿನ ಮನೆ ಕೇರ್ ಟೇಕರ್ಗಳಿಗೆ ಗೌರವಧನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಸ್ಪಷ್ಟೀಕರಣ ನೀಡಿದೆ. ಆದರೆ ತಾಲೂಕು ಪಂಚಾಯಿತಿ ಅಧಿಕಾರಿ ಸಂತೋಷಕುಮಾರ ಚವ್ಹಾಣ್ ಅವರು ಗ್ರಾಮ ಪಂಚಾಯತಿ ತೆರಿಗೆ ಹಣದಿಂದ ಗೌರವಧನ ಭರಿಸುವಂತೆ ಸೂಚಿಸಿದ್ದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕನಕಪುರ ಗ್ರಾಪಂ ಕೂಸಿನ ಮನೆ ಕೇರ್ ಟೇಕರ್ಗಳಿಗೆ ತೆರಿಗೆ ಹಣದಲ್ಲಿ ಚೆಕ್ ವಿತರಿಸಲಾಗಿದೆ. ಗಾರಂಪಳ್ಳಿ, ಹಸರಗುಂಡಗಿ, ಅಣವಾರ, ಗಡಿನಿಂಗದಳ್ಳಿ, ಮಿರಿಯಾಣ, ಐನೋಳ್ಳಿ ಇತರೆಡೆ ಕೇರ್ ಟೇಕರ್ಗಳಿಗೆ ಬಾಕಿ ಹಣ ಪಾವತಿಯಾಗಿಲ್ಲ. ಇನ್ನು ಹಲವೆಡೆ ಕೇಂದ್ರಗಳೇ ಪ್ರಾರಂಭವಾಗಿಲ್ಲ.
ಸಿಎಂ ಕಚೇರಿ ಸೂಕ್ತ ಮಾಹಿತಿ ನೀಡುವಂತೆ ಸೂಚಿಸಿದೆ. ಆದರೆ ಸ್ಥಳಿಯ ಅಧಿಕಾರಿಗಳು ಸಿಎಂ ಕಚೇರಿ ಹಾಗೂ ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ಕೊಟ್ಟು ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಕೂಡಲೇ ಸಂಬಂಧಿತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಅಕ್ರಮದ ತನಿಖೆ ನಡೆಸಿ ಬಡ ಕೇರ್ ಟೇಕರ್ಗಳಿಗೆ ನ್ಯಾಯ ಒದಗಿಸುವುದು ಜರೂರಿಯಾಗಿದೆ.
ಜಿಲ್ಲೆಯಲ್ಲೇ ಚಿಂಚೋಳಿ ತಾಲೂಕು ತೆರಿಗೆ ಸಂಗ್ರಹದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಜೂನ್ನಲ್ಲಿ ಕೂಸಿನ ಮನೆ ಯೋಜನೆ ಹಾಗೂ ಕೇರ್ ಟೇಕರ್ಗಳಿಗೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ ಜಮೆಯಾಗಿದ್ದ ಅನುದಾನ ಚರಂಡಿ, ನೀರು ಸರಬರಾಜು ಹೀಗೆ ವಿವಿಧ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕೂಸಿನ ಮನೆಗೆ ಬಂದ ಅನುದಾನ ಇತರೆ ಕೆಲಸಕ್ಕೆ ಬಳಸದಂತೆ ಸ್ಪಷ್ಟ ನಿರ್ದೇಶನವಿದ್ದರೂ ಬಳಸಿದ್ದಾದರೂ ಹೇಗೆ ಎಂಬುದೇ ಪ್ರಶ್ನೆಗೆ ಸಂಬಂಧಿತರೇ ಉತ್ತರ ನೀಡಬೇಕು.