

ಸೇಡಂ: ದೇಶದಲ್ಲಿ ಶಾಂತಿ, ಸೌಹಾರ್ದ ಮತ್ತು ಸಮಾನತೆ ಕಾಪಾಡುವ ಅಗತ್ಯವಿದೆ. ಬುದ್ಧನ ಶಾಂತಿ ಮತ್ತು ಕರುಣೆ ಸಂದೇಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಡಾ.ಶಾಕು ಬೋಧಿ ಧಮ್ಮ ಕರೆ ನೀಡಿದರು.
ಅಂತಾರಾಷ್ಟ್ರೀಯ ಬೌದ್ಧ ಯುವ ಸಂಘಟನೆ, ಗ್ಲೋಬಲ್ ಡಾ.ಅಂಬೇಡ್ಕರ್ ಬೌದ್ಧ ಮಿಷನ್, ಯುಎಸ್ಎ, ಅಖಿಲ ಭಾರತ ಡಾ.ಅಂಬೇಡ್ಕರ್ ಭಿಕ್ಕು ಸಂಘ ಹಾಗೂ ಬೌದ್ಧ ಮಹಾಸ್ತೂಪ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆ ಸನ್ನತಿ ಮತ್ತು ಕನಗನಹಳ್ಳಿ ಸಹಯೋಗದಡಿ ಪಟ್ಟಣದಲ್ಲಿ ಸೋಮವಾರ ಏರ್ಪಡಿಸಿದ್ದ ಧಮ್ಮ ಪ್ರವಚನ ಸಮಾರಂಭದಲ್ಲಿ ಅವರು ಮಾತನಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ 1956ರಲ್ಲಿ ಲಕ್ಷಾಂತರ ಅನುಯಾಯಿಗಳೊಂದಿಗೆ ನಾಗಪುರದಲ್ಲಿ ಬೌದ್ಧ ಧಮ್ಮ ಸ್ವೀಕರಿಸಿದರು. ಸಮಾನತೆ, ಸ್ವಾತಂತ್ರ್ಯ ಮತ್ತು ಸಹೋದರತ್ವ ಆಧಾರದ ಮೇಲೆ ಸಮ ಸಮಾಜ ನಿಮಾರ್ಣದ ಮಹತ್ವ ಸಾರಿದರು. ಅವರ ಆಶಯದಂತೆ ಸಮ ಸಮಾಜ ನಿಮಾರ್ಣ ಹಾಗೂ ಬುದ್ಧನ ಧಮ್ಮದ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸುವುದು ಅಗತ್ಯವಾಗಿದೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಜೈಭೀಮ ಊಡಗಿ ಮಾತನಾಡಿ, ಬಾಬಾಸಾಹೇಬರು ನೀಡಿದ ಸಂವಿಧಾನದ ಚೌಕಟ್ಟಿನಲ್ಲಿಯೇ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ಬಲಪಡಿಸಬೇಕಾಗಿದೆ. ಬುದ್ಧನ ಶಾಂತಿ, ಕರುಣೆ, ಸಮಾನತೆ ಮತ್ತು ಸಹೋದರತ್ವದ ಸಂದೇಶ ಜನರಿಗೆ ತಿಳಿಸುವಲ್ಲಿ ಧಮ್ಮ ಜನಜಾಗೃತಿ ಯಾತ್ರೆ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.
ತಾಪಂ ಮಾಜಿ ಸದಸ್ಯ ವಿಜಯಕುಮಾರ ಶಮಾರ್, ಪುರಸಭೆ ಮಾಜಿ ಸದಸ್ಯ ರವೀಂದ್ರ ಜಡೇಕರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಾಗರ, ಪ್ರಮುಖರಾದ ವಿಲಾಸಗೌತಮ ನಿಡಗುಂದಾ, ಸಂದೀಪ ಕಟ್ಟಿವಾಡಿ, ಪ್ರಶಾಂತ ಸೇಡಮಕರ್, ಸಿದ್ದು ಡೊಣ್ಣುರ, ಅರುಣಕುಮಾರ ಮೂಡಬೂಳಕರ್, ಶ್ರೀಕಾಂತ ಜಾಪನೂರ, ಶ್ರೀನಿವಾಸ ಸಂಗಾವಿ, ಅಂಬರೀಶ ಗುಡಿ, ಗೌತಮ ಹಳ್ಳಿ, ಈಶ್ವರ ಮಾಧವಾರ, ವಿಶ್ವ ಸಂಗಾವಿ, ಮಹಾದೇವ ಊಡಗಿ ಇತರರಿದ್ದರು. ನಾಗರಾಜ ಊಡಗಿ ಸ್ವಾಗತಿಸಿ ನಿರೂಪಣೆ ಮಾಡಿದರು. ಇದಕ್ಕೂ ಮುನ್ನ ನಗರಕ್ಕೆ ಆಗಮಿಸಿದ ಕರ್ನಾಟಕ ಧಮ್ಮ ಜನಜಾಗೃತಿ ಯಾತ್ರೆಗೆ ಭವ್ಯ ಸ್ವಾಗತ ಕೋರಲಾಯಿತು.