

ಚಿಂಚೋಳಿ: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಐವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ಐನೊಳ್ಳಿಯ ಶಶಿಧರ ಪುಣ್ಯಶೆಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ ನ.22ರಂದು ಮಾಡಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ ಹೇಳಿದರು. ಪ್ರಥಮ 25,000 ರೂ., ದ್ವೀತಿಯ 11,000 ರೂ., ತೃತೀಯ, ಚತುರ್ಥಿ ಹಾಗೂ ಪಂಚಮ ತಲಾ 5,000 ರೂ. ನಗದು ಬಹುಮಾನ ಹಾಗೂ ಸನ್ಮಾನ ಮಾಡಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಸಾಧನೆ ಮಾಡಿದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಿಗೆ ಲ್ಯಾಪ್ಟಾಪ್ ವಿತರಣೆ ಹಾಗೂ ಶಿಕ್ಷಣ, ಸಾಮಾಜಿಕ, ಸಾರ್ವಜನಿಕ, ರಾಜಕೀಯ ಮತ್ತು ಕೃಷಿ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಡಿ.25ರಂದು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ವಿಜಯಕುಮಾರ ರೊಟ್ಟಿ, ನರಸಿಂಹಲು ಕುಂಬಾರ, ಅಲ್ಲಾವುದ್ದಿನ್ ಅನ್ಸಾರಿ, ಇಬ್ರಾಹಿಂಸಾಬ್ ದೇಗಲಮಡಿ, ರಾಜಕುಮಾರ ಮಂದಾ, ದಿನೇಶ ದುಗ್ಗಾಣಿ, ಶರಣು ಪಪ್ಪಾ, ಹಣಮಂತ ಇತರರಿದ್ದರು.