11 ಜಲಾಶಯ ನೀರು ಜಮೀನಿಗೆ ಬರಲಿ

ನೀರಾವರಿ ಹೋರಾಟ ಆರಂಭ
ನೀರಾವರಿ ಹೋರಾಟ ಆರಂಭ
Published on

ಪ್ರಮುಖ ಮುಖ್ಯಾಂಶಗಳು

  • ಭೀಮಾ ಮಿಷನ್, ಶಾಶ್ವತ ನೀರಾವರಿ ಹೋರಾಟ ಸಮಿತಿ
ಕಲಬುರಗಿ: ಬೀದರ್​, ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿರುವ 11 ಜಲಾಶಯಗಳಿಂದ ಕಾಲುವೆ ನೀರಾವರಿ ಎಲ್ಲೆಡೆ ವ್ಯರ್ಥವಾಗಿದ್ದು, ಆಡಳಿತದಲ್ಲಿ ಇರುವವರು ಗಮನ ಹರಿಸಬೇಕು ಎಂದು ಅಧ್ಯಯನ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಭೀಮಾ ಮಿಷನ್​ ಅಧ್ಯಕ್ಷ, ಶಾಶ್ವತ ನೀರಾವರಿ ಹೋರಾಟ ಸಮಿತಿಯ ಭೀಮಶೆಟ್ಟಿ ಮುಕ್ಕಾ ಹೇಳಿದರು.
ಅಫಜಲಪುರ ತಾಲೂಕಿನ ಬಳೂಂಡಗಿ ಗ್ರಾಮದಲ್ಲಿ ಮೂರು ಜಿಲ್ಲೆಗಳಲ್ಲಿ ನೀರಾವರಿ ಅಧ್ಯಯನ, ಪ್ರತಿಭಟನಾತ್ಮಕ 900 ಕಿ.ಮೀ. ಕಾಲುವೆ ಮಾರ್ಗದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಮೂರು ಜಿಲ್ಲೆಯ 11 ಜಲಾಶಯಗಳಲ್ಲಿ ಶೇ.90 ನೀರಿದ್ದು, ಕಾಲುವೆಗಳೂ ನಿರ್ಮಾಣವಾಗಿದೆ. ಆದರೆ ರೈತರ ಜಮೀನುಗಳಿಗೆ ಹನಿ ನೀರು ಹರಿಯದೇ ವ್ಯರ್ಥವಾಗುತ್ತಿದ್ದು, ಇದಕ್ಕೆ ಪರಿಹಾರ ಒದಗಿಸಬೇಕು, ರೈತರಿಗೆ ನೀರು ದೊರೆಯಬೇಕು. ಆಡಳಿತದಲ್ಲಿ ಇರುವವರು ಇತ್ತ ಚಿತ್ತ ಹರಿಸಬೇಕು ಎಂದು ಮನವಿ ಮಾಡಿದರು.
ಕಲಬುರಗಿಯಲ್ಲಿ ಆರು ಜಲಾಶಯಗಳಿದ್ದು, 14.848 ಟಿಎಂಸಿ ಸಂಗ್ರಹ ಸಾಮರ್ಥ್ಯವಿದೆ. ಇದರಿಂದ 1.67 ಲಕ್ಷ ಎಕರೆ ನೀರಾವರಿ ಆಗಬೇಕಿತ್ತು. ಬೀದರ್​ ಜಿಲ್ಲೆಯಲ್ಲಿ ಮೂರು ಜಲಾಶಯಗಳಿದ್ದು, 9.378 ಟಿಎಂಸಿ ಸಾಮರ್ಥ್ಯವಿದ್ದು, 73.95 ಸಾವಿರ ಎಕರೆ ನೀರಾವರಿ ಆಗಬೇಕಿತ್ತು. ಯಾದಗಿರಿ ಜಿಲ್ಲೆಯಲ್ಲಿ ಎರಡು ಜಲಾಶಯಗಳಿದ್ದು, 0639 ಟಿಎಂ ಸಾಮರ್ಥ್ಯವಿದ್ದು, 8 ಸಾವಿರ ಎಕರೆನೀರಾವರಿ ಆಗಬೇಕಿತ್ತು. ಆದರೆ ಇದುವರೆಗೆ ರೈತರಿಗೆ ಅನುಕೂಲವಾಗಿಲ್ಲ. ಇದಕ್ಕೆ ಪರಿಹಾರ ದೊರೆಯಬೇಕು ಎಂದು ಹೇಳಿದರು.
ಪ್ರಮುಖರಾದ ಗಿರೀಶಗೌಡ ಇನಾಮದಾರ, ಪ್ರೊ ಬಸವರಾಜ್ ಕುಮನೂರ, ಮಲ್ಲಿಕಾರ್ಜುನ ಹುಳಗೇರಾ ಆದಿನಾಥ ಹೀರಾ, ಮಲ್ಲಿನಾಥ ಪಾಟೀಲ್, ವಿಜಯಕುಮಾರ ಚೆಗಟ್ಟಿ, ಪ್ರಿಯಾ ಹೊಸಗೌಡ, ಶಿವರಾಜ ಬಿರಾದಾರ, ಶಿವಕುಮಾರ ಪಾಟೀಲ್, ಸುಂದರ್ , ಅಭಿಷೇಕ್ ಪಾಟೀಲ್, ನಾಗರೆಡ್ಡಿ ಇತರರಿದ್ದರು.

ಗಂಗಾ ಪೂಜೆಯೊಂದಿಗೆ ಆರಂಭ

ಬಳ್ಳೂಂಡಗಿ ಬಳಿ ಗಂಗಾ ಪೂಜೆ ನೆರವೇರಿಸಿ, ಮಾದಬಾಳ ತಾಂಡಾ, ಅಫಜಲಪುರ ತಾಂಡಾಕ್ಕೆ ಆಗಮಿಸಿದ್ದು, ರೈತರೊಬ್ಬರ ಜಮೀನಿನಲ್ಲಿ ವಾಸ್ತವ್ಯ ಮಾಡಲಾಯಿತು. ಗುರುವಾರ 12 ಕಿ.ಮೀ. ಪಾದಯಾತ್ರೆ ನಡೆಸಲಾಯಿತು.

ಮಾರ್ಚ್ 30ರವರೆಗೆ ಪಾದಯಾತ್ರೆ

ಕಲಬುರಗಿಯಲ್ಲಿ 558 ಕಿ.ಮೀ., ಬೀದರ್​ ಜಿಲ್ಲೆಯಲ್ಲಿನ 323 ಕಿ.ಮೀ. ಮತ್ತು ಯಾದಗಿರಿ ಜಿಲ್ಲೆಯಲ್ಲಿನ 25 ಕಿ.ಮೀ ಸೇರಿ ಒಟ್ಟು 906 ಕಿ.ಮೀ. ಉದ್ದದ ಕಾಲುವೆಗಳು ಇರುವ ಮಾರ್ಗದಲ್ಲಿ ಪಾದಯಾತ್ರೆ ಸಾಗಿ, ಹೇರೂರ ಬಳಿಯ ಬೆಣ್ಣೆತೋರಾ ಡ್ಯಾಂ ಬಳಿ ಮಾ.30ರಂದು ಸಮಾರೋಪವಾಗಲಿದೆ ಎಂದು ಸಂಘಟಕರು ತಿಳಿಸಿದರು.
ನೀರಿದ್ದರೂ, ಕಾಲುವೆಗಳಿದ್ದರೂ ರೈತರ ಜಮೀನಿಗೆ ನೀರು ತಲುಪಿಲ್ಲ, ಸರ್ಕಾರ ನೀರಾವರಿ ಮಾಡುತ್ತಿದೆ ಎಂದು ಸುಳ್ಳು ಹೇಳುತ್ತಿದ್ದು. ಇದನ್ನು ಅರಿಯಬೇಕು, ಜಲಾಶಯಗಳ ವಾಸ್ತವ ಅರಿಯಬೇಕು, ಅಪೂರ್ಣ ಮುಖ್ಯ ಕಾಲುವೆ, ವಿತರಣೆ ಕಾಲುವೆ, ಮರಿ ಕಾಲುವೆ, ಮಣ್ಣು ತುಂಬಿದ, ಒಡೆದ ಕಾಲುವೆ, ಜನರಿಗೆ ತಲುಪಿದ್ದ ನೀರಾವರಿ ಕುರಿತು ಅಧ್ಯಯನ ನಡೆಸಲು, ಜನರಲ್ಲಿ ಜಾಗೃತಿ ಮೂಡಿಸಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
! ಭೀಮಶೆಟ್ಟಿ ಮುಕ್ಕಾ,
ಅಧ್ಯಕ್ಷ ಭೀಮಾ ಮಿಷನ್​
ಜಿಲ್ಲೆಯ ನೀರಾವರಿಗೆ ಆಡಳಿತದಲ್ಲಿ ಇರುವವರ ಆಸಕ್ತಿ ವಹಿಸಬೇಕು. ರೈತರು ಜಾಗೃತರಾಗಿ ಹೋರಾಟ ಆರಂಭಿಸಿದರೆ ಹೊಸ ಶಕ್ತಿ ಬರಲಿದೆ. ಭೀಮಾ, ಅಮರ್ಜಾ, ಚುಳಕಿ ನಾಲಾ, ಕಾರಂಜಾ, ಚಂದ್ರಂಪಳ್ಳಿ, ಮುಲ್ಲಾಮರಿ, ಹತ್ತಿಕುಣಿ, ಸೌದಾಗರ, ಮುಲ್ಲಾಮಾರಿ ಮೇಲ್ದಂಡೆ, ಗಂಡೋರಿ ನಾಲಾ, ಬೆಣ್ಣೆತೋರಾದಂತ ಮಧ್ಯಮ ನೀರಾವರಿ ಯೋಜನೆಗಳ ಅನುಷ್ಠಾನವೂ ಸಂಪೂರ್ಣ ವಿಫಲವಾಗಿದ್ದು, ಹೋರಾಟ, ಅಧ್ಯಯನದ ಮೂಲಕವೇ ಸ್ಪಷ್ಟ ಸಂದೇಶ ನೀಡಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
! ಡಾ.ಬಸವರಾಜ ಕುಮ್ನೂರ್​
ಸಾಮಾಜಿಕ ಹೋರಾಟಗಾರ
ದೂರದೃಷ್ಟಿಯೊಂದಿಗೆ ನೀರಾವರಿ ಯೋಜನೆಗಳ ಕುರಿತು ಪಾದಯಾತ್ರೆ ಆರಂಭಿಸಿದ್ದು, ಮೊದಲ ದಿನವೇ ಬಹುತೇಕ ಕಡೆ ಕಾಲುವೆಗಳಲ್ಲಿ ಮುಳ್ಳು ಕಂಟಿ ಬೆಳೆದಿದ್ದು, ನೀರಿನ ಸದ್ಬಳಕೆ ಆಗುತ್ತಿಲ್ಲ. ಅಧಿಕಾರಿಗಳು, ರೈತರು ಈ ಬಗ್ಗೆ ಮುನ್ನೆಚರಿಕೆ ವಹಿಸಿ, ನೀರಿನ ಜಾಗೃತಿ ಮೂಡಿಸಬೇಕು.
! ಗಿರೀಶಗೌಡ ಇನಾಮದಾರ, ಅಧ್ಯಕ್ಷ
ರಾಜ್ಯ ಕೃಷಿ ಕಾರ್ಮಿಕರ ರೈತ ಸಂಘ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net