

ಕಲಬುರಗಿ : ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಗೆ ಇದೇ ಅಕ್ಟೋಬರ್ 23 (ಶುಕ್ರವಾರ) ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಗುರುವಾರ ಆಯಾ ಜಿಲ್ಲೆಯಲ್ಲಿ ನಡೆಯುತ್ತಿರುವ ಮಸ್ಟರಿಂಗ್ ಕಾರ್ಯ ಪ್ರಗತಿ ಕುರಿತು ಕ್ಷೇತ್ರದ ಚುನಾವಣಾಧಿಕಾರಿ ಮತ್ತು ವೀಕ್ಷಕರು ಮಾಹಿತಿ ಪಡೆದುಕೊಂಡರು.
ಗುರುವಾರ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಜಹೀರಾ ನಸೀಮ್ ಮತ್ತು ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಅವರು ವಿಡಿಯೋ ಕಾನ್ಫೆರೆನ್ಸ್ ಮೂಲಕ ಕ್ಷೇತ್ರದ ವ್ಯಾಪ್ತಿಯ ಏಳು ಜಿಲ್ಲೆಗಳ ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ಸಭೆ ನಡೆಸಿ ಮಸ್ಟರಿಂಗ್ ಕಾರ್ಯ ಸುಲಲಿತವಾಗಿ ಜರುಗುವಂತೆ ನೋಡಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಮಾತನಾಡಿದ ಚುನಾವಣಾಧಿಕಾರಿ ಜಹೀರಾ ನಸೀಮ್ ಅವರು, ನಿಗದಿಯಂತೆ ಬೆಳಿಗ್ಗೆ 8 ಗಂಟೆಗೆ ಮತದಾನ ಆರಂಭಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಮತಗಟ್ಟೆಗಳಿಗೆ ಅವಶ್ಯವಿರುವ ನಮೂನೆ, ಲಕೋಟೆ ಹಾಗೂ ಸ್ಟೇಷನರಿ ಸಾಮಗ್ರಿಗಳನ್ನು ಮತಗಟ್ಟೆ ಅಧಿಕಾರಿ-ಸಿಬ್ಬಂದಿಗಳಿಗೆ ನೀಡಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇನ್ನು ಮತದಾನ ದಿನದಂದು ಪ್ರತಿ ಎರಡು ಗಂಟೆಗೊಮ್ಮೆ ಮತದಾನ ಪ್ರಮಾಣ ಕುರಿತು ವರದಿ ನೀಡಬೇಕೆಂದು ಸೂಚಿಸಿದರು.
ಅವಶ್ಯಕತೆಯಿರುವ ಮತದಾನ ಕೇಂದ್ರದಲ್ಲಿ ಶಾಮಿಯಾನದ ವ್ಯವಸ್ಥೆ ಮಾಡಬೇಕು. ಮತಗಟ್ಟೆ ಸಿಬ್ಬಂದಿಗಳಿಗೆ ಊಟೋಪಚಾರದ ವ್ಯವಸ್ಥೆ ಮಾಡಬೇಕು ಸೂಕ್ಷ್ಮ, ಅತಿಸೂಕ್ಷ್ಮ ಹಾಗೂ ಸಾಮಾನ್ಯ ಮತಗಟ್ಟೆಗಳಿಗೆ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಬೇಕೆಂದ ಚುನಾವಣಾಧಿಕಾರಿಗಳು, ಮತದಾನದ ನಂತರ ಬ್ಯಾಲೆಟ್ ಬಾಕ್ಸ್ ಗಳನ್ನು ಬಿಗಿ ಭದ್ರತೆಯಲ್ಲಿ ಭದ್ರತಾ ಕೊಠಡಿಗೆ ತಲುಪಿಸುವ ವ್ಯವಸ್ಥೆ ಮಾಡಬೇಕೆಂದರು.
ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ. ಮಾತನಾಡಿ, ಮತಗಟ್ಟೆಗೆ ಬರುವ ಮತದಾರರನ್ನು ಸೌಹಾರ್ದತವಾಗಿ ನಡೆಸಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಇನ್ನು ಡಿ.ಇ.ಓ ಗಳು ಮಸ್ಟರಿಂಗ್ ಮತ್ತು ಡಿ-ಮಸ್ಟರಿಂಗ್ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿರುವ ಬ್ಗಗೆ ಖಾತ್ರಿಪಡಿಸಿಕೊಳ್ಳಬೇಕೆಂದರು.
ಸಭೆಯಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಕಲಬುರಗಿ ಮಹಾನಗರ ಪಾಲಿಕೆಯ ಉಪ ಆಯುಕ್ತರು(ಅಭಿವೃದ್ಧಿ) ಮತ್ತು ಪ್ರಭಾರಿ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾಗಿರುವ ಪ್ರಮೀಳಾ ಎಂ.ಕೆ. ಸೇರಿದಂತೆ ಏಳು ಜಿಲ್ಲೆಗಳ ಸಹಾಯಕ ಚುನಾವಣಾಧಿಕಾರಿಗಳು ಭಾಗಿಯಾಗಿದ್ದರು.