

ಕಲಬುರಗಿ: ಕನ್ನಡ ಅಧ್ಯಾಪಕರ ಸಂಘ ಸ್ಥಾಪಿಸಿರುವುದು ಸಂತಸದ ಸಂಗತಿ. ಸಂಘಗಳು ವಿತ್ತೀಯವಾಗಿ ಬಲಿಷ್ಠವಾಗಲು ಅಧ್ಯಾಪಕರು ಸಂಘಕ್ಕೆ ದೇಣಿಗೆ, ವಂತಿಗೆ ನೀಡಬೇಕು. ಕನ್ನಡ ಭಾಷೆ ಪೋಷಣೆಗೆ ಈ ಕೆಲಸ ಮಾಡಬೇಕು ಎಂದು ಗುಲ್ಬರ್ಗ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹೇಳಿದರು.
ವಿವಿ ಕನ್ನಡ ಅಧ್ಯಯನ ಸಂಸ್ಥೆ ಹರಿಹರ ಸಭಾಂಗಣದಲ್ಲಿ ಮಂಗಳವಾರ ವಿಶ್ವವಿದ್ಯಾಲಯದ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘ ಉದ್ಘಾಟಿಸಿ ಮಾತನಾಡಿದ ಅವರು, ಬರಹಗಾರರು ಮತ್ತು ಲೇಖಕರಿಗೆ ಸಂಘ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವಿಕ್ರಮ ವಿಸಾಜಿ ಮಾತನಾಡಿ, ಕನ್ನಡ ಅಧ್ಯಯನ ಸಂಸ್ಥೆ ಪವಿತ್ರ ಸ್ಥಳ. ಅನೇಕ ಸಂಘಗಳು ಬೇಗ ಜನ್ಮತಾಳಿ ಅಷ್ಟೇ ಬೇಗ ಮರೆಯಾಗುತ್ತವೆ. ಈ ಸಂಘ ಗಟ್ಟಿಯಾಗಿ ಬೆಳೆದು ಉತ್ತಮ ಕಾರ್ಯನಿರ್ವಹಿಸಲಿ. ಬೌದ್ಧಿಕ ವಿಕಾಸದ ವಾತಾವರಣ ಸೃಷ್ಟಿಗೆ ಪ್ರಯತ್ನಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಚ್.ಟಿ. ಪೋತೆ ಮಾತನಾಡಿ, ಕನ್ನಡದ ಉಳಿವಿಗೆ ಅಧ್ಯಾಪಕರು ಸಂಘಟಿತರಾಗಬೇಕು. ಕನ್ನಡ ಸಂಘ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಖಾಜಾವಲಿ ಈಚನಾಳ ಪ್ರಾಸ್ತಾವಿಕ ಮಾತನಾಡಿದರು. ಮಹಿಳಾ ಪ್ರತಿನಿಧಿ ಸುವರ್ಣ ವಜ್ಜೆ, ಸಂಘದ ಪದಾಧಿಕಾರಿಗಳಾದ ಡಾ.ಜಗಪ್ಪ ತಳವಾರ, ಡಾ.ಮಲ್ಲಪ್ಪ ಮಾನೇಗಾರ, ಡಾ.ರೇವಣಸಿದ್ಧ ನಿಂಗಾನಾಯ್ಕ, ಡಾ.ರವೀಂದ್ರ ಕುಂಬಾರ, ಡಾ.ದಯಾನಂದ ಕಾಂಬಳೆ, ಡಾ.ಗುಲಾಮ್ ಮಹೆಬೂಬ್, ಡಾ.ಸಂಗೀತಾ ಹಿರೇಮಠ, ಡಾ.ಮರೆಪ್ಪ ಮೇತ್ರೆ, ಮಾರುತಿ ಮಾರ್ಪಳ್ಳಿ, ಡಾ.ರುಕ್ಮಿಣಿ, ಭೀಮಣ್ಣ ಬೆಡಕಪಳ್ಳಿ ಇತರರಿದ್ದರು.
ಉಪಾಧ್ಯಕ್ಷ ಡಾ.ಪಂಡಿತ ಬಿ.ಕೆ. ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರೊ.ಸೂರ್ಯಕಾಂತ ಅತನೂರ ಸಂದ ಬೇಡಿಕೆಗಳ ಪಟ್ಟಿ ಓದಿ ಅಧ್ಯಯನ ಸಂಸ್ಥೆ ನಿರ್ದೇಶಕರಿಗೆ ಸಲ್ಲಿಸಿದರು. ಬಸವರಾಜ ಶೃಂಗೇರಿ ಪ್ರಾರ್ಥಿಸಿದರು. ಡಾ.ಕಪಿಲ್ ಚಕ್ರವರ್ತಿ ನಿರೂಪಣೆ ಮಾಡಿದರು. ಡಾ.ಶಿವಶರಣಪ್ಪ ಮೋತಕಪಳ್ಳಿ ವಂದಿಸಿದರು.
ನಿವೃತ್ತ ಪ್ರಾಧ್ಯಾಪಕಿ ಡಾ.ಚಿತ್ಕಳಾ ಮಠಪತಿ, ಡಾ.ಅನ್ನಪೂರ್ಣ ಪಾಟೀಲ್, ಡಾ.ಶ್ರೀಶೈಲ್ ನಾಗರಾಳ, ಡಾ.ಸುರೇಂದ್ರ ಕೆರಮಗಿ, ಡಾ.ಅಮೃತಾ ಕಟಕೆ ಹಾಗೂ ಕುವೆಂಪು ಭಾಷಾ ಭಾರತಿ ಅನುವಾದ ಪ್ರಶಸ್ತಿಗೆ ಭಾಜನರಾದ ಡಾ.ಸೂರ್ಯಕಾಂತ ಸುಜ್ಯಾತ್, ಹೊಸದಾಗಿ ಪುಸ್ತಕ ಪ್ರಕಟಿಸಿದ ಡಾ.ಮಲ್ಲಿನಾಥ ತಳವಾರ, ಡಾ.ಮಿರಾಜ್ ಪಾಷಾ, ಡಾ.ಸಂಗಣ್ಣ ಸಿಂಗೆ, ಡಾ.ದತ್ತಾತ್ರೇಯ ಅವರನ್ನು ಸತ್ಕರಿಸಲಾಯಿತು. ಅಧ್ಯಾಪಕರ ಸಂದ ಪದಾಧಿಕಾರಿಗಳ ಪದಗ್ರಹಣವೂ ನಡೆಯಿತು.