

ಕಲಬುರಗಿ: ವಿಶ್ವೇಶ್ವರಯ್ಯ ಭವನದಲ್ಲಿ ಬುಧವಾರ, ಗುರುವಾರ ನಡೆಯಲಿರು ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಮಂಗಳವಾರ ಸಮ್ಮೇಳನಾಧ್ಯಕ್ಷ ಡಾ.ನಾಗೇಂದ್ರ ಮಸೂತಿ ಅವರ ಕಾವ್ಯ ಚಿತ್ರಕಲಾ ಪ್ರದರ್ಶನ ಜರುಗಿತು.
ಹೊನ್ನಕಿರಣಗಿಯ ಶ್ರೀ ಚಂದ್ರಗುಂಡ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಮಾತನಾಡಿ, ಲೇಖಕನ ಕಾವ್ಯವು ಶಬ್ದಗಳ ಮೂಲಕ ಮನಸ್ಸಿನ ಭಾವನೆಗಳಿಗೆ ಜೀವ ನೀಡಿದರೆ, ಚಿತ್ರಕಲೆ ಬಣ್ಣ ಮತ್ತು ರೇಖೆಗಳ ಮೂಲಕ ಅದೇ ಭಾವನೆಗಳಿಗೆ ದೃಶ್ಯ ರೂಪ ನೀಡುತ್ತದೆ. ಲೇಖಕ ಡಾ.ನಾಗೇಂದ್ರ ಮಸೂತಿ ಅವರು ಒಬ್ಬ ಬಹುಮುಖ ಸಾಹಿತಿ ಎಂದು ಬಣ್ಣಿಸಿದರು.
ಸಮ್ಮೇಳನಾಧ್ಯಕ್ಷರೂ ಆದ ಹಿರಿಯ ಸಾಹಿತಿ ಡಾ.ನಾಗೇಂದ್ರ ಮಸೂತಿ ಮಾತನಾಡಿ, ಸಾಹಿತಿಯು ಕೇವಲ ಕಲ್ಪನಾ ಜಗತ್ತಿನಲ್ಲಿರದೆ, ಸಮಾಜಕ್ಕೆ ಕಣ್ಣಾಗುವ ಮತ್ತು ದಾರಿದೀಪವಾಗುವ ಶಕ್ತಿ ಹೊಂದಿರುತ್ತಾನೆ ಎಂದು ಅಭಿಪ್ರಾಯಪಟ್ಟರು.
ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು.
ಪ್ರಮುಖರಾದ ವಿ.ಬಿ.ಬಿರಾದಾರ, ಪರಮೇಶ್ವರ ಶೆಟಕಾರ, ಪೊ.ಬಿ.ಎ.ಪಾಟೀಲ, ಚಂದ್ರಶೇಖರ ಕಕ್ಕೇರಿ, ಡಾ.ಬಾಬುರಾವ ಶೇರಿಕಾರ, ಶಿವರಾಜ ಅಂಡಗಿ, ರವೀಂದ್ರಕುಮಾರ ಭಂಟನಳ್ಳಿ, ವಿದ್ಯಾಸಾಗರ ದೇಶಮುಖ, ಧರ್ಮರಾಜ ಜವಳಿ, ಪರಮಾನಂದ ಸರಸಂಬಿ, ಶರಣರಾಜ ಛಪ್ಪರಬಂದಿ, ಗಣೇಶ ಚಿನ್ನಾಕಾರ ಇತರರಿದ್ದರು.
ವಿಶ್ವೇಶ್ವರಯ್ಯ ಭವನದ ಹಿರಿಯ ಸಾಹಿತಿ ಡಾ.ಚಂದ್ರಕಲಾ ಬಿದರಿ ವೇದಿಕೆಯಡಿ ಬೆಳಗ್ಗೆ 11.15ಕ್ಕೆ ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಅಧ್ಯಕ್ಷೆ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್. ಅಪ್ಪ ಅವರು 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ನೀಡುವರು. ಹಾರಕೂಡದ ಶ್ರೀ ಡಾ.ಚನ್ನವಿರ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಮುಡುಬಿ ಗುಂಡೇರಾವ, ಜಿಲ್ಲಾಧಿಕಾರಿ ಇಕ್ರಮ್ ಶರೀಫ್, ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ., ರಾಜು ಲೇಂಗಟಿ ಮುಖ್ಯ ಅತಿಥಿಗಳಾಗಿದ್ದಾರೆ. ಹಲವು ಗೋಷ್ಠಿ, ಕವಿಗೋಷ್ಠಿಯಲ್ಲಿ ನಡೆಯಲಿವೆ. ವಿವಿಧ ಕ್ಷೇತ್ರದ ಸಾಧಕರಿಗೆ ಸೇವಾ ಕಲಾ ಕೌಶಲ ಹಾಗೂ ಸಾಹಿತ್ಯ ಸಂಗಾತಿ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಗುವುದು ಎಂದು ವಿಜಯಕುಮಾರ ತೇಗಲತಿಪ್ಪಿ ತಿಳಿಸಿದ್ದಾರೆ.