

ಶಹಾಬಾದ್: ನಗರದ ಕೂಗಳತೆಯ ದೂರದಲ್ಲೆ ಸಿಮೆಂಟ್ ಕಾರ್ಖಾನೆ ನಿರ್ಮಾಣವಾಗುತ್ತಿದ್ದರೂ ಶಹಾಬಾದ್ ವ್ಯಾಪಾರಸ್ಥರಿಗೆ ಮಾತ್ರ ಅದರ ಲಾಭ ಸಿಗುತ್ತಿಲ್ಲ. ಹದಗೆಟ್ಟ ರಸ್ತೆ ಕಾರಣ ಕಾರ್ಖಾನೆ ಕಾರ್ಮಿಕರು, ಸಿಬ್ಬಂದಿ ಜೇವರ್ಗಿಯತ್ತ ಮುಖ ಮಾಡಿದ್ದು, ಸ್ಥಳಿಯ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ.
ತೊನಸನಳ್ಳಿ (ಎಸ್) ಮತ್ತು ಹೊನ್ನಕಿರಣಗಿ ಮಧ್ಯೆ ಕಲಬುರಗಿ ಸಿಮೆಂಟ್ ಕಾರ್ಖಾನೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಇಲ್ಲಿ ಅಧಿಕಾರಿಗಳು, ಇಂಜಿನಿಯರ್, ಮೇಲ್ವಿಚಾರಕರು ಹಾಗೂ ಕಾರ್ಮಿಕರು ಸೇರಿ ಸುಮಾರು 1,000ರಿಂದ 1,200 ಜನ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಸುಮಾರು 400 ಮಂದಿ ಇಂಜಿನಿಯರ್ಗಳು, ಮೇಲ್ವಿಚಾರಕರು ಸೇರಿ ತಾಂತ್ರಿಕ ಸಿಬ್ಬಂದಿಯಾಗಿದ್ದಾರೆ. ಇವರೆಲ್ಲರೂ ಕೆಲಸ ಮುಗಿದ ಬಳಿಕ ಸುಮಾರು 12-13 ಕಿ.ಮೀ. ದೂರದ ಜೇವರ್ಗಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಿಸುತ್ತಿದ್ದಾರೆ.
ಕಾರ್ಖಾನೆ ನಿರ್ಮಾಣ ಸ್ಥಳದಲ್ಲಿಯೇ ಕಾರ್ಮಿಕರ ವಸತಿಗಾಗಿ ಶೆಡ್ಗಳನ್ನು ನಿರ್ಮಿಸಲಾಗಿದೆ. ಅಲ್ಲಿಯೇ ವಾಸಿಸುವ ಕಾರ್ಮಿಕರು ಕೂಡ ದಿನನಿತ್ಯದ ಅಗತ್ಯ ವಸ್ತುಗಳ ಖರೀದಿಗಾಗಿ ಜೇವರ್ಗಿಗೆ ತೆರಳುತ್ತಿದ್ದಾರೆ. ನಗರಕ್ಕೆ ಸಮೀಪದಲ್ಲಿದ್ದರೂ ಶಹಾಬಾದ್ಗೆ ಬಾರದಿರುವುದಕ್ಕೆ ಹದಗೆಟ್ಟ ರಸ್ತೆ ಪ್ರಮುಖ ಕಾರಣವಾಗಿದೆ.
ನಗರದ ಹೊರವಲಯದಲ್ಲಿರುವ ಮರಗೋಳ ಮಹಾವಿದ್ಯಾಲಯದಿಂದ ಕಲಬುರಗಿ&ಜೇವರ್ಗಿ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಜೇವರ್ಗಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸುಮಾರು ಐದಾರು ಕಿ.ಮೀ. ಉದ್ದದ ರಸ್ತೆಯಲ್ಲಿ ಬೃಹತ್ ಗಾತ್ರದ ತೆಗ್ಗುಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ. ಮಳೆ ಬಂದರೆ ತಗ್ಗುಗಳಲ್ಲಿ ನೀರು ನಿಂತು ರಸ್ತೆ ಮತ್ತಷ್ಟು ಹದಗೆಡುತ್ತದೆ.
ಇಂತಹ ರಸ್ತೆಯಲ್ಲಿ ಕಾರ್ಖಾನೆ ಸಿಬ್ಬಂದಿ ಹಾಗೂ ಕಾರ್ಮಿಕರು ಸಂಚರಿಸಿ ಶಹಾಬಾದ್ಗೆ ಬಂದು ಖರೀದಿ ಮಾಡುವುದಕ್ಕಿಂತ, ತುಸು ದೂರವಾದರೂ ಉತ್ತಮ ಸಂಪರ್ಕ ಹೊಂದಿರುವ ಮಾರ್ಗದ ಮೂಲಕ ಜೇವರ್ಗಿಗೆ ತೆರಳುವುದನ್ನೇ ಅನುಕೂಲಕರವೆಂದು ಭಾವಿಸಿದ್ದಾರೆ. ಹೀಗಾಗಿ ಸಮೀಪದ ನಗರದಲ್ಲೆ ಬಾಡಿಗೆ ಮನೆ ಪಡೆಯುವ ಹಾಗೂ ಖರೀದಿ ಮಾಡುವ ಅವಕಾಶಗಳಿದ್ದರೂ ಅವು ಜೇವರ್ಗಿಗೆ ವರ್ಗಾವಣೆಯಾಗುತ್ತಿವೆ.
ಕಾರ್ಖಾನೆ ನಿರ್ಮಾಣ ಸ್ಥಳದಿಂದ ಕೇವಲ 7&8 ಕಿ.ಮೀ. ದೂರದಲ್ಲಿರುವ ಶಹಾಬಾದ್ನಲ್ಲಿ ಕಾರ್ಮಿಕರು ಬಾಡಿಗೆ ಮನೆ ಪಡೆಯದೆ, ದಿನನಿತ್ಯದ ಖರೀದಿಗೂ ಬಾರದೆ ಇರುವುದರಿಂದ ಸ್ಥಳಿಯವಾಗಿ ಹರಿಯಬೇಕಿದ್ದ ಹಣ ನೆರೆಯ ಜೇವರ್ಗಿ ತಾಲೂಕಿಗೆ ಹರಿದು ಹೋಗುತ್ತಿದೆ. ಹೊಸ ಕೈಗಾರಿಕೆ ಬಂದರೂ ಸ್ಥಳಿಯ ವ್ಯಾಪಾರಕ್ಕೆ ಲಾಭವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ರಸ್ತೆ ಕಾಮಗಾರಿಗೆ ಚಾಲನೆ ನೀಡಬೇಕಿದೆ ಎಂಬುದು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ.
ಒಂದು ಕಾಲದಲ್ಲಿ ಕೈಗಾರಿಕೆ ಮತ್ತು ಹಾಸುಗಲ್ಲಿನ ಉದ್ಯಮದಿಂದ ಪ್ರಸಿದ್ಧಿ ಪಡೆದಿದ್ದ ಶಹಾಬಾದ್ ನಗರ ಈಗ ಒಂದೊಂದೇ ಆರ್ಥಿಕ ಆಧಾರ ಕಳೆದುಕೊಳ್ಳುತ್ತಿದೆ. ನಗರದ ಎರಡು ಪ್ರಮುಖ ಜೆಇ ಮತ್ತು ಜೆಪಿ ಕಾರ್ಖಾನೆಗಳು ಮುಚ್ಚಿವೆ. ಸರ್ಕಾರದ ಗಣಿ ನೀತಿಯಿಂದ ಸುತ್ತಮುತ್ತಲಿನ ಗಣಿಗಾರಿಕೆ ಚಟುವಟಿಕೆಗಳೂ ಸ್ಥಗಿತಗೊಂಡಿವೆ. ಮತ್ತೊಂದೆಡೆ, ಟೈಲ್ಸ್ಗಳ ಬಳಕೆ ಹೆಚ್ಚಾದ ಪರಿಣಾಮ ಶಹಾಬಾದ್ ಹಾಸುಗಲ್ಲಿಗೆ ಬೇಡಿಕೆ ಕಡಿಮೆಯಾಗಿದೆ. ಇದರಿಂದ ಈಗಾಗಲೇ ವ್ಯಾಪಾರ ವಹಿವಾಟು ಕುಸಿದು ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ವ್ಯಾಪಾರಸ್ಥರಿಗೆ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರಿಂದಲಾದರೂ ವ್ಯಾಪಾರ ಹೆಚ್ಚಾಗಬಹುದು ಎಂಬ ನಿರೀೆಯಿತ್ತು. ಆದರೆ ಹದಗೆಟ್ಟ ರಸ್ತೆ ಆ ನಿರೀೆಗೂ ತಣ್ಣೀರೆರಚಿದೆ.
ಶಹಾಬಾದ್& ಜೇವರ್ಗಿ ರಸ್ತೆ ಅಫಜಲಪುರ ಶಾಸಕ ಎಂ.ವೈ.ಪಾಟೀಲ್ ಹಾಗೂ ಕಲಬುರಗಿ ಗ್ರಾಮೀಣ ೇತ್ರದ ಶಾಸಕ ಬಸವರಾಜ ಮತ್ತಿಮಡು ಅವರ ವ್ಯಾಪ್ತಿಗೆ ಬರುತ್ತದೆ. ರಸ್ತೆ ಅಭಿವೃದ್ಧಿಗೆ 10.75 ಕೋಟಿ ರೂ. ಹಾಗೂ 7 ಕೋಟಿ ರೂ. ಸೇರಿ ಒಟ್ಟು 17.75 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಬಸವರಾಜ ಮತ್ತಿಮಡು ಅವರು ತಿಳಿಸಿ ಸುಮಾರು ಆರು ತಿಂಗಳು ಕಳೆದಿವೆ. ಆದರೆ ಇನ್ನೂ ಟೆಂಡರ್ ಪ್ರಕ್ರಿಯೆಯೇ ಪೂರ್ಣಗೊಂಡಿಲ್ಲ. ಅನುದಾನ ಮಂಜೂರಾದರೂ ಕಾಮಗಾರಿ ಆರಂಭವಾಗದಿರುವುದು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.