

ಚಿತ್ತಾಪುರ: ಕವನ, ಕವಿತೆಗಳಿಂದ ಮಾತ್ರ ದೇಶ ಮತ್ತು ನಾಡಿನ ಸಂಸತಿ ಉಳಿಯಲು ಸಾಧ್ಯ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿ ಸೈಯದ್ ನಜಿರೋದ್ದಿನ್ ಮುತ್ತವಲ್ಲಿ ಹೇಳಿದರು.
ವರುಣ ನಗರದ ಶರಣಬಸವೇಶ್ವರ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ನಾಗಾವಿ ದಸರಾ ವೈಭವ ಸಮಿತಿ ಸಹಯೋಗದಡಿ ಬುಧವಾರ ಏರ್ಪಡಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಕವಿತೆ ಇಲ್ಲದೆ ಯಾವ ಸಂಸತಿಯೂ ಉಳಿವುದಿಲ್ಲ. ಕವಿ ತನ್ನ ನೋವು&ನಲಿವು ಹಾಗೂ ಸಮಕಾಲಿನ ಸಮಸ್ಯೆಗಳನ್ನು ಕವನಗಳ ಮೂಲಕ ಅಭಿವ್ಯಕ್ತಗೊಳಿಸುತ್ತಾನೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಉಮೇಶಬಾಬು ಸಾಸಬಾಳ ಮಾತನಾಡಿ, ಹರಿಯುವ ನೀರೆಲ್ಲ ತೀರ್ಥವಾಗುವುದಿಲ್ಲ. ಹಾಗೆಯೇ ಬರೆಯುವ ಎಲ್ಲ ಪದಗಳು ಕವಿತೆಯಾಗುವುದಿಲ್ಲ. ದಸರಾ ವೈಭವ, ರೈತನ ಸ್ಥಿತಿ, ಮಳೆ ಕೊರತೆ, ತಾಯಿ ತ್ಯಾಗ ಕುರಿತು ವಾಚಿಸಿದ 30 ಕವಿತೆಗಳಲ್ಲಿ ಕವಿಗಳು ತಮ್ಮ ಸಾಮಾರ್ಥ್ಯ ಪ್ರದರ್ಶಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆ ಆಗಿದ್ದರೂ ಅದ್ಭುತ ಕಾವ್ಯ ರಚಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.
ಕಸಾಪ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಗುರುಮಿಠಕಲ್ ಮಾತನಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗ ಬಾಳಿ, ಕೆನರಾ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ರಾಜೇಶ ಕಾಶಿ, ದಸರಾ ವೈಭವ ಸಮಿತಿ ಅಧ್ಯಕ್ಷ ರಾಚಪ್ಪ ಬೊಮ್ಮನಳ್ಳಿ, ಪ್ರಮುಖರಾದ ಕರಣಕುಮಾರ ಅಲ್ಲೂರ, ಸಂತೋಷ ಪೂಜಾರಿ, ಲೋಹಿತ್ ಮುದ್ದಡಗಿ, ಪ್ರೇಮಲತಾ ಆಚಿಗೇರಿಕರ, ವೀರಭದ್ರಪ್ಪ ಹುಮನಾಬಾದ್, ಮಲ್ಲಿಕಾರ್ಜುನರೆಡ್ಡಿ ಇಜಾರ, ಮಹ್ಮದ್ ಇಬ್ರಾಹಿಂ, ಅಂಬರೇಶ ಸುಲೇಗಾಂವ್, ವಿಜಯಕುಮಾರ ಭಂಕಲಗಿ ಇತರರಿದ್ದರು.
ಸಂಗಮೇಶ ರೋಣದ್ ಪ್ರಾಸ್ತಾವಿಕ ಮಾತನಾಡಿದರು. ನರಸಪ್ಪ ಚಿನ್ನಕಟ್ಟಿ ನಿರೂಪಣೆ ಮಾಡಿದರು. ನಾಗೇಂದ್ರಪ್ಪ ಹೊಟ್ಟಿ ಸ್ವಾಗತಿಸಿದರು. ವಿಜಯಕುಮಾರ ಯಾಗಾಪುರ ವಂದಿಸಿದರು. ಗೋಷ್ಠಿಯಲ್ಲಿ 30 ಕವಿಗಳು ಕವನ ವಾಚನ ಮಾಡಿದರು.