

ಅಯ್ಯಪ್ಪ ಮಾಲಧಾರಿಯಾಗಿ ಶಬರಿಮಲೆಗೆ ತೆರಳಿ, ಇರುಮುಡಿ ಸಮರ್ಪಿಸಿ ಸಂತೃಪ್ತಿಯಿಂದ ತಾಯ್ನಾಡಿಗೆ ಮರಳುತ್ತಿದ್ದ ಮಹಾದೇವ ಅಟ್ಟೂರ (58) ಅವರು ಮಾರ್ಗಮಧ್ಯೆ ಸಂಭವಿಸಿದ ತೀವ್ರ ಹೃದಯಾಘಾತದಿಂದ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಮಾಲಧಾರಿಗಳಲ್ಲಿ ದುಃಖ ಮೂಡಿಸಿದೆ.
ಮಹಾದೇವ ಅಟ್ಟೂರ ಅವರು ತಮ್ಮ ಪುತ್ರ ಸೇರಿದಂತೆ ಹಲವಾರು ಮಾಲಧಾರಿಗಳೊಂದಿಗೆ ಶಬರಿಮಲೆಗೆ ತೆರಳಿದ್ದರು. ಇರುಮುಡಿ ಸಮರ್ಪಿಸಿ ರೈಲಿನಲ್ಲಿ ಕಲಬುರಗಿಗೆ ವಾಪಸ್ ಆಗುತ್ತಿದ್ದ ವೇಳೆ ಗುಂತಕಲ್ ಬಳಿ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ.
ತಕ್ಷಣ ಅವರನ್ನು ರೈಲಿನಿಂದ ಕೆಳಗೆ ಇಳಿಸಿ, ಸ್ಟೇಷನ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಸುನೀಗಿದರು. ಶಬರಿಮಲೆ ಯಾತ್ರೆಯನ್ನು ಪೂರ್ಣಗೊಳಿಸಿ ಕುಟುಂಬದವರ ಬಳಿಗೆ ಮರಳಬೇಕಿದ್ದ ಅವರು, ದುರದೃಷ್ಟವಶಾತ್ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಮೂಲತಃ ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮದವರಾಗಿದ್ದ ಮಹಾದೇವ ಅವರು ಕಲಬುರಗಿಯ ಬ್ರಹ್ಮಪುರ ಬಡಾವಣೆಯಲ್ಲಿ ವಾಸವಾಗಿದ್ದರು.
ಪಾರ್ಥಿವ ಶರೀರವನ್ನು ಕಲಬುರಗಿಯ ಬ್ರಹ್ಮಪುರ ಬಡಾವಣೆಯಲ್ಲಿ ಕೆಲಕಾಲ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬಳಿಕ ಸೋಮವಾರ ಸಂಜೆ ಕುಟುಂಬಸ್ಥರು ಹಾಗೂ ಬಂಧುಗಳ ಆಕ್ರಂದನದ ಮಧ್ಯೆ ಅಟ್ಟೂರ ಗ್ರಾಮದ ಸ್ವಂತ ಹೊಲದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.