

ಚಿಂಚೋಳಿ: ಚೆಟ್ಟಿನಾಡ ಸಿಮೆಂಟ್ ಕಾರ್ಖಾನೆ ಆಡಳಿತ ಮಂಡಳಿಯು ಸ್ಥಳಿಯ ವಾಹನ ಚಾಲಕರು, ಟಿಪ್ಪರ್ ಮತ್ತು ಲಾರಿ ಮಾಲೀಕರು ಹಾಗೂ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿ ಮೂಲನಿವಾಸಿ ವಾಹನ ಚಾಲಕರ ಸಂಘ ಹಾಗೂ ಲಾರಿ ಮತ್ತು ಟಿಪ್ಪರ್ ಮಾಲೀಕರ ಸಂಘದಿಂದ ಸೋಮವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಬೃಹತ್ ವಾಹನಗಳ ರೋಡ್ ಶೋ ನಡೆಸಿದ ಪ್ರತಿಭಟನಾಕಾರರು, ಕಲ್ಲೂರ ರಸ್ತೆ ಸಮೀಪದಲ್ಲಿನ ಕಾರ್ಖಾನೆ ಮುಖ್ಯದ್ವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಮೂಲನಿವಾಸಿ ವಾಹನ ಚಾಲಕರ ಸಂಘದ ಅಧ್ಯಕ್ಷ ಮಾರುತಿ ಗಂಜಗೇರಾ ಮಾತನಾಡಿ, ಕೈಗಾರಿಕೆಗಳ ಅಭಿವೃದ್ಧಿ ಕೇವಲ ಉತ್ಪಾದನೆ ಮತ್ತು ಲಾಭಕ್ಕೆ ಸೀಮಿತವಾಗಬಾರದು. ಕೈಗಾರಿಕೆ ಇರುವ ಪ್ರದೇಶದ ಸ್ಥಳಿಯರಿಗೆ ನ್ಯಾಯಯುತ ಉದ್ಯೋಗಾವಕಾಶ ಕಲ್ಪಿಸಬೇಕು. ವಾಹನ ಮಾಲೀಕರಿಗೆ ಪಾರದರ್ಶಕ ಸಾರಿಗೆ ವ್ಯವಸ್ಥೆ ಹಾಗೂ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಬೇಕು. ಸ್ಥಳಿಯ ವಾಹನ ಮಾಲೀಕರು ಬ್ಯಾಂಕ್ಗಳಿಂದ ಸಾಲ ಪಡೆದು ಟಿಪ್ಪರ್ ಹಾಗೂ ಲಾರಿಗಳನ್ನು ಖರೀದಿಸಿ ಸಾರಿಗೆ ಉದ್ಯಮ ನಡೆಸುತ್ತಿದ್ದಾರೆ. ವಾಹನಗಳ ಸಾಲದ ಕಂತು, ಡೀಸೆಲ್ ವೆಚ್ಚ, ನಿರ್ವಹಣೆ, ವಿಮೆ, ತೆರಿಗೆ ಹಾಗೂ ಚಾಲಕರ ವೇತನ ಸೇರಿ ಹಲವು ಆರ್ಥಿಕ ಹೊರೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಸ್ಥಳಿಯ ಕಂಪನಿಗಳಿಂದ ನಿರೀಕ್ಷಿತ ಉದ್ಯೋಗ ಮತ್ತು ಸಾರಿಗೆ ಅವಕಾಶಗಳು ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈನಿಂಗ್ ಇಲಾಖೆಯಿಂದ ಅನುಮತಿ ಪಡೆದ ರಾಯಲ್ಟಿ ಸ್ಥಳದಿಂದಲೇ ಕೆಂಪು ಮಣ್ಣು ಸಾಗಿಸಬೇಕು. ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳ ವಾಹನ ಚಾಲಕರು ಮದ್ಯಪಾನ ಅಥವಾ ಮಾದಕ ವಸ್ತುಗಳ ಪ್ರಭಾವದಲ್ಲಿ ವಾಹನ ಚಾಲನೆ ಮಾಡುವುದು, ಅತಿವೇಗ ಮತ್ತು ಅಜಾಗರೂಕ ಚಾಲನೆಯಿಂದ ರೈತರು, ದ್ವಿಚಕ್ರ ವಾಹನ ಸವಾರರು ಹಾಗೂ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗುತ್ತಿದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾರ್ಖಾನೆಯ ಪ್ಯಾಕಿಂಗ್ ವಿಭಾಗದಲ್ಲಿ ಕಾರ್ಮಿಕರ ಸುರತೆಗೆ ಸೂಕ್ತ ಕ್ರಮಗಳಿಲ್ಲದ ಕಾರಣ ಆರೋಗ್ಯ ಸಮಸ್ಯೆ ಎದುರಾಗುತ್ತಿವೆ. ಹೀಗಾಗಿ ಅಗತ್ಯ ಸುರಕ್ಷಿತಾ ಸೌಲಭ್ಯ ಅಳವಡಿಸಬೇಕು. ಸ್ಥಳಿಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡಬೇಕು. ಸಾರಿಗೆ ಗುತ್ತಿಗೆ ಹಾಗೂ ಲೋಡಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ವಾಹನ ಚಾಲಕರಿಗೆ ಕಾರ್ಖಾನೆ ಆವರಣದಲ್ಲಿ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಕಾರ್ಖಾನೆ ಸಿಬ್ಬಂದಿಗೆ ಮನವಿಪತ್ರ ಸಲ್ಲಿಸಲಾಯಿತು. ಪ್ರಮುಖರಾದ ಮಸೂದ್ ಸೌದಾಗರ, ಬಾಬುಮಿಯ್ಯ, ಮುಜೀಬ್ ಎಂ.ಎಂ.ಸಿ., ಪ್ರಕಾಶ ಭಕ್ತಂಪಳ್ಳಿ, ಗೋವಿಂದ, ಮಹೇಶ ಕುಸರಂಪಳ್ಳಿ, ಅಮರನಾಥ ಹೂವಿನಬಾವಿ, ಮೋಹನ ಐನಾಪುರ, ಮೋಬಿನ್, ಪಿಂಟು, ಮತೀನ್, ಸದ್ದಾಂ, ಶಿವಕುಮಾರ ಜಾಬಶೆಟ್ಟಿ, ಸಂತೋಷ, ದಾವುದ್, ಮೊಗಲಪ್ಪ ಬೇಡಕಪಳ್ಳಿ, ಅಶೋಕ, ಸುರೇಶ ಕಮಲಾಕರ, ಶಾಂತಕುಮಾರ, ಜೈಭೀಮ್, ಮಿಥುನ್, ಅನ್ಸಾರಿ, ಶಿವರಾಜ, ಮಾರುತಿ, ಅಹಮದ್, ಲೋಕೇಶ, ತಾನಾಜಿ, ನರಸಿಂಹಲು, ದಿಲೀಪ್ ಇತರರಿದ್ದರು.