ಅ. 28ರಂದು ಜಿಲ್ಲಾಧಿಕಾರಿಗೆ ಮನವಿ; ಸ್ಪಂದಿಸದಿದ್ದರೆ ತೀವ್ರ ಹೋರಾಟ (WATER PROBLEM)

ಚಿಂಚೋಳಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ಹಾಹಾಕಾರ: ಅ. 29ರಂದು ಚಿಮ್ಮನಚೋಡ ಬಂದ್‌ಗೆ ಕರೆ
ಚಿಂಚೋಳಿ ಪಟ್ಟಣದ ದಿ. ವೈಜನಾಥ ಪಾಟೀಲ್ ಸ್ಮಾರಕದ ಬಳಿ ಸೋಮವಾರದಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಹಮ್ಮಿಕೊಂಡ ಮಹತ್ವದ ಸಭೆಯಲ್ಲಿ ಸುದಿರ್ಘವಾಗಿ ಚರ್ಚಿಸಿ  ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಗೌತಮ ಪಾಟೀಲ್ ಮಾತನಾಡಿದರು. ರವಿರಾಜ ಕೋರವಿ, ಗೋಪಾಲರಾವ ಕಟ್ಟಿಮನಿ, ಗೋಪಾಲ ಎಂ.ಪಿ ಗಾರಂಪಳ್ಳಿ, ವೀರಣ್ಣ ಗಂಗಣ್ಣಿ, ಭೀಮಶೇಟ್ಟಿ ಮುರುಡಾ, ಶಂಕರಗೌಡ ಅಲ್ಲಾಪುರ ಇದ್ದರು.
ಚಿಂಚೋಳಿ ಪಟ್ಟಣದ ದಿ. ವೈಜನಾಥ ಪಾಟೀಲ್ ಸ್ಮಾರಕದ ಬಳಿ ಸೋಮವಾರದಂದು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ತನ್ನ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಹಮ್ಮಿಕೊಂಡ ಮಹತ್ವದ ಸಭೆಯಲ್ಲಿ ಸುದಿರ್ಘವಾಗಿ ಚರ್ಚಿಸಿ ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಗೌತಮ ಪಾಟೀಲ್ ಮಾತನಾಡಿದರು. ರವಿರಾಜ ಕೋರವಿ, ಗೋಪಾಲರಾವ ಕಟ್ಟಿಮನಿ, ಗೋಪಾಲ ಎಂ.ಪಿ ಗಾರಂಪಳ್ಳಿ, ವೀರಣ್ಣ ಗಂಗಣ್ಣಿ, ಭೀಮಶೇಟ್ಟಿ ಮುರುಡಾ, ಶಂಕರಗೌಡ ಅಲ್ಲಾಪುರ ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಚಿಂಚೋಳಿ

ಚಿಂಚೋಳಿ ಕ್ಷೇತ್ರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಎದುರಾಗಿದ್ದು, ಜನರು, ಜಾನುವಾರುಗಳು ಹಾಗೂ ಪಕ್ಷಿಗಳ ರಕ್ಷಣೆಗೆ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು. ಜನರ ಕುಡಿಯುವ ನೀರಿನ ಹಕ್ಕನ್ನು ಕಡೆಗಣಿಸದೆ ಕೂಡಲೇ ನೀರು ಬಿಡುಗಡೆ ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಗೌತಮ ಪಾಟೀಲ್ ಆಗ್ರಹಿಸಿದರು.

ಪಟ್ಟಣದ ದಿ. ವೈಜನಾಥ ಪಾಟೀಲ್ ಸ್ಮಾರಕದ ಬಳಿ ಸೋಮವಾರ ನಡೆದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮಹತ್ವದ ಸಭೆಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎದುರಾಗಿರುವ ನೀರಿನ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ. ಜನರು ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಸರ್ಕಾರಕ್ಕೆ ಒಂದು ವಾರದ ಗಡುವು ನೀಡಲಾಗಿತ್ತು. ಆದರೆ, ಗಡುವು ಈಗಾಗಲೇ ಮುಗಿದಿದ್ದರೂ ಸಮಸ್ಯೆಗೆ ಪರಿಹಾರ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅ. 28ರಂದು ಜಿಲ್ಲಾಧಿಕಾರಿಗೆ ಮನವಿ

ನೀರಿನ ಸಮಸ್ಯೆ ಪರಿಹಾರಕ್ಕಾಗಿ ಅ. 28ರಂದು ಶಾಸಕ ಡಾ. ಅವಿನಾಶ ಜಾಧವ್ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘಟನೆಗಳ ಮುಖಂಡರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲಿದೆ. ಕ್ಷೇತ್ರಕ್ಕೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಲಾಗುವುದು. ನಿಯೋಗದ ಮನವಿಗೆ ಸರ್ಕಾರ ಹಾಗೂ ಜಿಲ್ಲಾಡಳಿತ ಸಕಾರಾತ್ಮಕವಾಗಿ ಸ್ಪಂದಿಸಿ ನೀರು ಬಿಡುಗಡೆ ಮಾಡಿದರೆ ಹೋರಾಟದ ಅಗತ್ಯವಿರುವುದಿಲ್ಲ. ಇಲ್ಲವಾದಲ್ಲಿ ಜನರ ಹಕ್ಕಿಗಾಗಿ ತೀವ್ರ ಸ್ವರೂಪದ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಸಿದರು.

ಅ. 29ರಂದು ಚಿಮ್ಮನಚೋಡ ಬಂದ್‌ಗೆ ಕರೆ

ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಅ. 29ರಂದು ಚಿಮ್ಮನಚೋಡ ಬಂದ್‌ಗೆ ಕರೆ ನೀಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಹೋರಾಟಕ್ಕೆ ರೈತರು ಹಾಗೂ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಲಿದ್ದಾರೆ ಎಂಬ ವಿಶ್ವಾಸವನ್ನು ಮುಖಂಡರು ವ್ಯಕ್ತಪಡಿಸಿದರು.

ಕುಡಿಯುವ ನೀರಿನ ಕೊರತೆಯಿಂದ ಜನಜೀವನ ಅಸ್ತವ್ಯಸ್ತವಾಗುವುದರ ಜತೆಗೆ ಜಾನುವಾರುಗಳಿಗೂ ಸಂಕಷ್ಟ ಎದುರಾಗುತ್ತಿದೆ. ಪಕ್ಷಿಗಳಿಗೂ ನೀರಿನ ಅಭಾವದಿಂದ ತೊಂದರೆಯಾಗುವ ಆತಂಕವಿದೆ. ಹೀಗಾಗಿ ಜನರು ಮತ್ತು ಮೂಕಪ್ರಾಣಿಗಳ ಜೀವ ರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ನೀರು ಬಿಡುಗಡೆ ಮಾಡಬೇಕು ಎಂದು ಸಭೆಯ ಮೂಲಕ ಆಗ್ರಹಿಸಲಾಯಿತು.

ಸಭೆಯಲ್ಲಿ ಕೋಲಿ ಸಮಾಜದ ಜಿಲ್ಲಾಧ್ಯಕ್ಷ ರವಿರಾಜ ಕೋರವಿ, ಜಿಲ್ಲಾ ಮಾದಿಗ ಮಹಾಸಭೆಯ ಅಧ್ಯಕ್ಷ ಗೋಪಾಲರಾವ ಕಟ್ಟಿಮನಿ, ರೈತ ಮುಖಂಡ ಗೋಪಾಲ ಎಂ.ಪಿ. ಗಾರಂಪಳ್ಳಿ, ವೀರಣ್ಣ ಗಂಗಣ್ಣಿ, ಭೀಮಶೆಟ್ಟಿ ಮುರುಡಾ, ಶಂಕರಗೌಡ ಅಲ್ಲಾಪುರ, ಸತೀಶ ಇಟಗಿ, ಕೆ.ಎಂ. ಬಾರಿ, ಸಂತೋಷರೆಡ್ಡಿ, ಶಿವಕುಮಾರ ಅಂಬಲಗಿ, ಸುಭಾಷ್ ಕೊಂಡಾ, ಕುಮಾರ ದೇಸಾಯಿ, ರಾಜಕುಮಾರ ತಳವಾರ, ಗುರು ಪಾಟೀಲ್, ಗೋಪಾಲರೆಡ್ಡಿ, ಸತೀಶ ಗೌನಳ್ಳಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net