

ಕಲಬುರಗಿ : ಕರ್ನಾಟಕ ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮ್ ಹೇಳಿದರು.
ಶುಕ್ರವಾರ ಇಲ್ಲಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿ, ಚುನಾವಣಾ ಪ್ರಕ್ರಿಯೆ ಕುರಿತು ಅಗತ್ಯ ಸೂಚನೆಗಳನ್ನು ನೀಡಿದ ಅವರು, ಕ್ಷೇತ್ರದ ಎಲ್ಲ ತಾಲೂಕುಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೊಳಿಸುವ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದಲ್ಲಿ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ 08472-200255ಕ್ಕೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದರು.
ವಿಧಾನ ಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರದ ಒಂದು ಸ್ಥಾನಕ್ಕೆ ಅಕ್ಟೋಬರ್ 23ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆಯ ದಿನವಾಗಿದ್ದು, ಪಕ್ಷೇತರ ಅಭ್ಯರ್ಥಿ ನಬಿರಸೂಲ್ ತಂದೆ ದಸ್ತಗೀರಸಾಬ್ ಜಕಾತಿ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ.
ಬುಧವಾರ ನಡೆದ ನಾಮಪತ್ರಗಳ ಪರಿಶೀಲನೆಯಲ್ಲಿ 14 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವೆಂದು ಘೋಷಿಸಲಾಗಿತ್ತು. ಇದೀಗ ಒಬ್ಬ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವುದರಿಂದ ಅಂತಿಮವಾಗಿ 13 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ ಎಂದು ಹೇಳಿದರು.
ಅಭ್ಯರ್ಥಿಗಳು ಚುನಾವಣಾ ಕರಪತ್ರಗಳನ್ನು ಮುದ್ರಿಸುವ ಮೊದಲು ನಿಗದಿತ 'ಅನೆಕ್ಸರ್-7ಸಿ' ನಮೂನೆಯಡಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ವಾಹನಗಳನ್ನು ಬಳಸಲು ಜಿಲ್ಲಾಧಿಕಾರಿ ಕಚೇರಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ. ಇಡೀ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಾಹನ ಸಂಚಾರಕ್ಕೆ ಸಂಬಂಧಿಸಿದ ಅನುಮತಿಯನ್ನು ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ಪಡೆಯಬೇಕು ಎಂದು ಸೂಚಿಸಿದರು.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಒಟ್ಟು 34,784 ಮತದಾರರು ನೋಂದಣಿಯಾಗಿದ್ದಾರೆ. ಇವರಲ್ಲಿ 20,040 ಪುರುಷರು ಹಾಗೂ 14,744 ಮಹಿಳೆಯರಿದ್ದಾರೆ. ಕ್ಷೇತ್ರದಲ್ಲಿ ಬಳ್ಳಾರಿಯ ಒಂದು ಹೆಚ್ಚುವರಿ ಮತಗಟ್ಟೆ ಸೇರಿದಂತೆ ಒಟ್ಟು 144 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಮತಗಟ್ಟೆ ಏಜೆಂಟರನ್ನು ನಿಗದಿತ ನಮೂನೆಯಲ್ಲಿ ಜಿಲ್ಲಾಧಿಕಾರಿಗಳಿಗೆ ವಿವರ ಸಲ್ಲಿಸುವ ಮೂಲಕ ನೇಮಕ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಅಕ್ಟೋಬರ್ 23ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಮತದಾನದ ದಿನ ಮದ್ಯ ಮಾರಾಟ ಹಾಗೂ ಸೇವನೆಯನ್ನು ನಿಷೇಧಿಸಲಾಗುತ್ತದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಎಲ್ಲ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಮತದಾರರು ಚುನಾವಣಾ ಆಯೋಗ ಸೂಚಿಸಿರುವ ಅಧಿಕೃತ ಗುರುತಿನ ಚೀಟಿಗಳಲ್ಲಿ ಯಾವುದಾದರೊಂದನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಹೇಳಿದರು.
ಮತದಾರರು ಚುನಾವಣಾ ಆಯೋಗ ಒದಗಿಸುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ (Voilet Sketch Pen )ಮಾತ್ರ ತಮ್ಮ ಪ್ರಾಶಸ್ತ್ಯದ ಮತವನ್ನು ಚಲಾಯಿಸಬೇಕು. ಪ್ರಾಶಸ್ತ್ಯದ ಮತಗಳನ್ನು ಕನ್ನಡ, ಇಂಗ್ಲಿಷ್ ಅಥವಾ ರೋಮನ್ ಅಂಕಿಗಳಲ್ಲಿ ನಮೂದಿಸಬಹುದು. ಈ ಚುನಾವಣೆಯಲ್ಲಿ 'ನೋಟಾ' ಸೌಲಭ್ಯ ಇರುವುದಿಲ್ಲ. ಪ್ರಾಶಸ್ತ್ಯದ ಕ್ರಮಸಂಖ್ಯೆಯನ್ನು ನಮೂದಿಸದೆ ಮತ ಚಲಾಯಿಸುವುದು ಅಥವಾ ನಿಗದಿತ ಕ್ರಮಕ್ಕೆ ವಿರುದ್ಧವಾಗಿ ಇತರ ಗುರುತುಗಳನ್ನು ಹಾಕುವುದರಿಂದ ಮತ ಅಮಾನ್ಯವಾಗುವ ಸಾಧ್ಯತೆಯಿದೆ.
ಆದ್ದರಿಂದ ಮತದಾರರು ಸೂಚನೆಗಳನ್ನು ಸರಿಯಾಗಿ ಪಾಲಿಸಬೇಕು ಎಂದು ತಿಳಿಸಿದರು.
ಅಕ್ಟೋಬರ್ 27ರಂದು ಕಲಬುರಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯದ ಭಾಸ್ಕರ್ ಹಾಲ್‌ನಲ್ಲಿ ಭದ್ರತಾ ಕೊಠಡಿ (ಸ್ಟ್ರಾಂಗ್ ರೂಂ) ಹಾಗೂ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗುತ್ತದೆ. ಭಾಸ್ಕರ್ ಹಾಲ್ ಪಕ್ಕದಲ್ಲಿರುವ ಪ್ರಾಣಿಶಾಸ್ತ್ರ ವಿಭಾಗದ ಸಭಾಂಗಣದಲ್ಲಿ ಮಾಧ್ಯಮ ಕೇಂದ್ರ ಸ್ಥಾಪಿಸಲಾಗುವುದು. ಮತ ಎಣಿಕೆಗಾಗಿ ಒಟ್ಟು 14 ಟೇಬಲ್‌ಗಳ ವ್ಯವಸ್ಥೆ ಮಾಡಲಾಗುತ್ತದೆ. ಅಭ್ಯರ್ಥಿಗಳು ತಮ್ಮ ಮತ ಎಣಿಕೆ ಏಜೆಂಟರ ವಿವರಗಳನ್ನು ಭಾವಚಿತ್ರದೊಂದಿಗೆ ನಿಗದಿತ ನಮೂನೆ-18ರಲ್ಲಿ ಸಲ್ಲಿಸಬೇಕು ಎಂದು ಸೂಚಿಸಿದರು.
ಅಕ್ಟೋಬರ್ 27ರಂದು ಬೆಳಿಗ್ಗೆ 7.45ಕ್ಕೆ ಭದ್ರತಾ ಕೊಠಡಿಯ ಮುದ್ರೆ ತೆರೆಯಲಾಗುವುದು. ಈ ಸಂದರ್ಭದಲ್ಲಿ ಸಂಬಂಧಪಟ್ಟವರು ಕಡ್ಡಾಯವಾಗಿ ಹಾಜರಿರಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಂ ಶರೀಫ್, ಮಹಾನಗರ ಪಾಲಿಕೆಯ ಉಪ ಆಯುಕ್ತೆ (ಆಡಳಿತ) ಪ್ರಮೀಳಾ ಎಂ.ಕೆ. ಸೇರಿದಂತೆ ಚುನಾವಣಾಧಿಕಾರಿಗಳು ಹಾಗೂ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಉಪಸ್ಥಿತರಿದ್ದರು.