

ಕಲಬುರಗಿ: ಹಳ್ಳಿಗಳ ಜನಪದ ಜೀವನದಲ್ಲಿ ಜ್ಞಾನ, ವಿಜ್ಞಾನ ಅಡಗಿದೆ. ನೀರು ಮತ್ತು ಪರಿಸರವೇ ಆರೋಗ್ಯದ ಗುಟ್ಟು ಎಂದು ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ಅಭ್ಯುದಯ-2026 ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮೀಣ ಭಾಷೆ, ಸಂಸತಿ ಮತ್ತು ಜೀವನ ಶೈಲಿಯಲ್ಲಿ ವೈವಿಧ್ಯಮಯ ಅನುಭವಗಳಿವೆ. ಹಿಂದೆ ನದಿಗಳೇ ಪ್ರದೇಶಗಳ ಗಡಿಗಳಾಗಿದ್ದವು. ಕಾಲುದಾರಿಗಳಲ್ಲಿ ಸಂಚರಿಸುತ್ತಲೇ ನಮ್ಮ ಹಿರಿಯರು ಅನೇಕ ವಿಷಯ ಕಲಿತಿದ್ದಾರೆ. ಇಂದು ತಂತ್ರಜ್ಞಾನ ಮತ್ತು ಆಧುನಿಕ ಸೌಲಭ್ಯಗಳಿಂದ ನಾವು ಸಾಕಷ್ಟು ಬೆಳೆದಿದ್ದೇವೆ. ಆದರೆ ನೆರೆಮನೆಯವರೊಂದಿಗೆ ಮಾನವೀಯ ಸಂಬಂಧ ಬೆಳೆಸಿಕೊಳ್ಳುವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ನಾಡಿನಲ್ಲಿ ಹಿಂದೆ ನಿರ್ಮಿಸಲಾದ ಕೆರೆಕಟ್ಟೆ, ವಾಡೆ, ಜಲಸಂರಕ್ಷಣಾ ವ್ಯವಸ್ಥೆ ಮತ್ತು ವಾಸ್ತುಶಿಲ್ಪದ ವೈಶಿಷ್ಠಗಳು ಇಂದಿನ ಇಂಜಿನಿಯರಿಂಗ್ ಜ್ಞಾನಕ್ಕೂ ಸವಾಲಾಗುವಂತಿವೆ. ನಾವು ಬದಲಾವಣೆ ಕಂಡಿದ್ದೇವೆ. ಆದರೆ ನಿಜವಾದ ಸುಧಾರಣೆಯತ್ತ ಇನ್ನಷ್ಟು ಗಮನ ಹರಿಸಬೇಕಾಗಿದೆ. ನಮ್ಮ ಪೂರ್ವಜರು ಔಪಚಾರಿಕ ಶಿಕ್ಷಣ ಪಡೆಯದಿದ್ದರೂ ತಮ್ಮ ಬದುಕಿನ ಅನುಭವ, ಆದರ್ಶ ಮತ್ತು ಸಾಧನೆಗಳ ಮೂಲಕ ಸಮಾಜಕ್ಕೆ ಮಾದರಿಯಾದ ಅನೇಕ ಗ್ರಾಮೀಣ ಸಾಧಕರಿದ್ದಾರೆ. ಅವರ ಜೀವನ ನಮಗೆ ಪ್ರೇರಣೆಯಾಗಬೇಕು. ಆದ್ದರಿಂದ ನಾವು ನಮ್ಮ ಹಳ್ಳಿಗಳ ಬೇರುಗಳತ್ತ ಮರಳಬೇಕು ಎಂದು ಅಭಿಪ್ರಾಯಪಟ್ಟರು.
ಪ್ರಭಾರ ಕುಲಸಚಿವ ಪ್ರೊ.ಚನ್ನವಿರ ಆರ್.ಎಂ, ಕಾನೂನು ಅಧ್ಯಯನ ವಿಭಾಗದ ಡೀನ್ ಪ್ರೊ.ಬಸವರಾಜ ಕುಬಕಡ್ಡಿ ಮಾತನಾಡಿದರು. ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಅವರು ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಿದರು.
ಸಂಯೋಜಕ ಡಾ.ಗಣಪತಿ ಸಿನ್ನೂರು, ಪ್ರೊ.ಪಾಂಡುರಂಗ ಪತ್ತಿ, ಮುತ್ತಣ್ಣ, ಲೀನಾ, ಅಮರೇಶ್, ಅಶೋಕ, ಅನ್ವೀರ್, ಸಚಿನ್, ಕಿರಣ್, ಪವನ್ ಇತರರಿದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಾಂಸತಿಕ ಕಾರ್ಯಕ್ರಮಗಳು ಗಮನಸೆಳೆದವು.
ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಸಿಯಿಕೆ ಪರಿಸರದಲ್ಲಿ ಸಂಭ್ರಮದಿಂದ ಭುವನೇಶ್ವರಿ ದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ಮುಖ್ಯ ಕಚೇರಿಯಿಂದ ಶುರುವಾದ ಮೆರವಣಿಗೆ ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಪುನ@ ಕಾರ್ಯಕ್ರಮ ವೇದಿಕೆ ತಲುಪಿತು. ದಾರಿಯುದ್ದಕ್ಕೂ ವಿವಿಧ ಕಲಾ ತಂಡಗಳಿಂದ ಡೊಳ್ಳು ಕುಣಿತ ಹಾಗೂ ನೃತ್ಯ ಪ್ರದರ್ಶನ ಗಮನಸೆಳೆಯಿತು. ವಿದ್ಯಾರ್ಥಿಗಳು ನೂರಾರು ಮೀಟರ್ ಉದ್ದದ ಕನ್ನಡದ ಧ್ವಜದ ಶೋಭಾಯಾತ್ರೆ ನಡೆಸಿ ವಿಶೇಷ ಮೆರುಗು ನೀಡಿದರು.