ಕಲಬುರಗಿ: ಬೇಡವಾದ ವಿಷಯಗಳಿಂದ ಮನಸ್ಸು ದೂರವಾದರೆ ಅದೇ ಸಾಧನೆ ಎಂದು ಕೊಪ್ಪಳ ಗವಿಸಿದ್ದೇಶ್ವರ ಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ನುಡಿದರು.
ಸುಲಫಲ ಮಠದಲ್ಲಿ ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಮಹಾಸ್ವಾಮೀಜಿ 12ನೇ ವರ್ಷದ ಪೀಠಾರೋಹಣ ಮತ್ತು 60 ವರ್ಧಂತಿ ಮಹೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ದುಃಖದಿಂದ ಹೇಗೆ ಮುಕ್ತನಾಗಬೇಕೆಂಬ ಚಿಂತನೆ ನಿನ್ನಲ್ಲಿ ಬಂದರೆ ಅದೇ ಮುಕ್ತಿ. ಹೀನ ವಿಷಯಗಳಿಂದ ದೂರ ಆದರೆ ಅದೇ ಸಾಧನೆ. ನಿತ್ಯ ಹೊಸ ಬದುಕು. ಈ ಪ್ರಪಂಚದಲ್ಲಿ ತೊಳಲಾಟ, ಬಳಲಾಟ, ಹೊಗಳುವುದು, ತೆಗಳುವುದು ಇದ್ದದ್ದೇ. ಜೀವನದ ಅಲ್ಪಾವಧಿಯಲ್ಲಿ ಬೇಡವಾದ ವಿಷಯಗಳಿಂದ ದೂರವಿದ್ದು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ದೇಹ ಎಂಬುದು ಗಿರಿ, ಬೆಟ್ಟ ಮತ್ತು ಜ್ಞಾನ ಎಂಬುದು ಗಿರಿಯ ಶಿಖರವಾದರೆ, ಮೌನ ಎಂಬುದು ಧ್ಯಾನ. ಹೀಗಾಗಿ ಯಶಸ್ಸಿಗೆ ಮೌನ ಮತ್ತು ನಗೆ ಅತ್ಯಗತ್ಯ. ಜೀವನವನ್ನು ವೃಥಾ ವ್ಯರ್ಥ ಮಾಡದೆ ನಗೆಯ ಬುಗ್ಗೆಯೊಂದಿಗೆ ಸಾಧನೆ ಮಾಡಬೇಕು. ಜೀವನದಲ್ಲಿ ಎದುರಾಗುವ ಸಣ್ಣಪುಟ್ಟ ವಿಷಯಗಳಿಗೆ ತಲೆಕೆಡಿಸಿಕೊಳ್ಳದೆ ಮುಂದಡಿ ಇಡುತ್ತಿರಬೇಕು ಎಂದು ಹಿತೋಪದೇಶ ನೀಡಿದರು.
ಜೀವನ ತಿಳಿದುಕೊಳ್ಳುವ ಕುತೂಹಲದ ಕುರಿತು ಪಾಶ್ಚಿಮಾತ್ಯ ಚಿಂತಕ ವಿಲಿಯಂ ಜೇಮ್ಸ್ ಸಂಶೋಧನೆ ಮಾಡುತ್ತಾನೆ. ಶರಣರು, ಸಂತರು, ದಾರ್ಶನಿಕರೂ ಸಂಶೋಧನೆ ಮಾಡಿದ್ದಾರೆ. ಒಬ್ಬ ವ್ಯಕ್ತಿಯಿಂದ ದೂರ ಇರಬಹುದು, ಆದರೆ ಒಬ್ಬರು ಆಡಿದ ಮಾತಿನಿಂದ ದೂರ ಆಗಲು ಸಾಧ್ಯವಿಲ್ಲ. ಆ ಮಾತು ಸದಾ ನಮ್ಮ ತಲೆಯಲ್ಲಿ ಕಟೆಯುತ್ತಿರುತ್ತದೆ. ಎಲ್ಲವನ್ನು, ಎಲ್ಲರನ್ನು ಕಳೆದುಕೊಂಡಾಗ ನೆನಪು ಕಾಡುತ್ತದೆ. ದು@ಖವೂ ಆಗುತ್ತದೆ. ಒಂದು ಮದುವೆ ಸಮಾರಂಭದಲ್ಲಿ ಮನೆ ಹಿರಿಯ, ಯಜಮಾನನನ್ನು ಗ್ರುಪ್ ಫೋಟೋ ತೆಗೆಸಲು ಕರೆದಾಗ ಸ್ಟೇಜ್ ಮೇಲೆ ಕುಳಿತು ಕಣ್ಣೀರು ಹಾಕಿದನಂತೆ. ಯಾಕೆ ಈ ಖುಷಿ ಸಮಾರಂಭದಲ್ಲಿ ಕಣ್ಣೀರು ಹಾಕುತ್ತೀಯ ಎಂದು ಮಕ್ಕಳು ಕೇಳಿದರೆ, ಈ ಸಂದರ್ಭದಲ್ಲಿ ನಿಮ್ಮ ಅಜ್ಜಿ ಇದ್ದರೆ ಇನ್ನೂ ಮೆರುಗು ಬರುತ್ತಿತ್ತು ಎಂದನಂತೆ ಎನ್ನುವ ಮೂಲಕ ಪೂಜ್ಯರು ಸಭಿಕರನ್ನು ನಗೆಗಡಲಲ್ಲಿ ತೇಲಿಸಿದರು.
ಸೊನ್ನ ವಿರಕ್ತಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಸ್ವಾಗತಿಸಿದರು. ಶ್ರೀ ಚನ್ನಮಲ್ಲ ಸ್ವಾಮೀಜಿ ನಿರೂಪಣೆ ಮಾಡಿದರು. ಮುಂಡರಗಿ ಶ್ರೀ ನಿಜಗುಣಾನಂದ ಸ್ವಾಮೀಜಿ, ಶ್ರೀ ಶರಣಬಸವ ದೇವರು, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಡಾ.ಬಿ.ಜಿ. ಪಾಟೀಲ್, ತಿಪ್ಪಣ್ಣಪ್ಪ ಕಮಕನೂರ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಭೀಮಾಶಂಕರ ಬಿಲಗುಂದಿ, ಕೆಕೆಸಿಸಿಐ ಅಧ್ಯಕ್ಷ ಶರಣಬಸಪ್ಪ ಪಪ್ಪಾ, ಉದ್ಯಮಿ ಶಿವಕಾಂತ ಮಹಾಜನ್, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಲಚ್ಚಪ್ಪ ಜಮಾದಾರ್ ಇತರರಿದ್ದರು.
ಮಾತು ನಿಲ್, ಎದೆ ಕಲ್ ಆಗಬೇಕು. ಆಗಲೇ ಜೀವನ ಸರಳ, ಸುಂದರ ಮತ್ತು ಸುಖಮಯವಾಗಲು ಸಾಧ್ಯ. ಈ ಜೀವನದ ಜಾತ್ರೆಯಲ್ಲಿ ಸುಲಫಲ ಶ್ರೀಗಳು ಹೋರಾಟದ ಬದುಕು ನಡೆಸಿ ಮಠ&ಮಾನ್ಯಗಳನ್ನು ಮಾಡಿದ್ದಾರೆ. ಕಡುಬಡವರು, ದೀನ-ದುರ್ಬಲರಿಗೆ ನೆರವಾಗಿದ್ದಾರೆ. ಸಮಾಜದ ಓರೆ&ಕೋರೆ ತಿದ್ದಿದ್ದಾರೆ. ಸಮಾಜಮುಖಿ ಕಾರ್ಯದ ಮೂಲಕ ನಾಡಿನ ಮನೆ ಮಾತಾಗಿದ್ದಾರೆ. ಅವರು ಶತಮಾನೋತ್ಸವ ಸಂಭ್ರಮ ಕಾಣಲಿ ಎಂದು ಕೊಪ್ಪಳ ಶ್ರೀ ಹಾರೈಸಿದರು.