ಚೌಡಯ್ಯ ಶಕ್ತಿ ಸಂದೇಶದ ಅದ್ದೂರಿ, ಅರ್ಥಪೂರ್ಣ ಜಯಂತಿ ಜ.21ರಂದು

ambigar choudayya
ambigar choudayya
Published on

ಪ್ರಮುಖ ಮುಖ್ಯಾಂಶಗಳು

  • ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ
  • ಪ್ರತಿಭಾವಂತರಿಗೆ ಸನ್ಮಾನ, ತ್ರಿಚಕ್ರ ವಾಹನ ವಿತರಣೆ
ಕಲಬುರಗಿ: ನಿಜಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವವನ್ನು ನಗರದಲ್ಲಿ ಅದ್ದೂರಿ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಜಯಂತ್ಯುತ್ಸವ ಸಮಿತಿ ಪ್ರಮುಖರು, ಕೋಲಿ, ಕಬ್ಬಗಲಿ ಸಮಾಜದ ಮುಖಂಡರು ತಿಳಿಸಿದರು.
ಸಮಾಜದ ಬಸವರಾಜ ಬೂದಿಹಾಳ, ಅವ್ವಣ್ಣ ಮ್ಯಾಕೇರಿ, ಲಚ್ಚಪ್ಪ ಜಮಾದಾರ, ಜಯಂತಿ ಸಮಿತಿ ಅಧ್ಯಕ್ಷ ಜಯಪ್ರಕಾಶ ಕಮಕನೂರ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜ.21ರಂದು ಬೆಳಗ್ಗೆ 11ಕ್ಕೆ ನಗರದ ಗಂಜ್​ ಪ್ರದೇಶದ ನಗರೇಶ್ವರ ಶಾಲೆಯಿಂದ ಚೌಡಯ್ಯ ಭಾವಚಿತ್ರ, ಮೂರ್ತಿಯ ವಚನ ಗ್ರಂಥದ ರಥದ ಮೆರವಣಿಗೆ ಡಾ.ಎಸ್​.ಎಂ.ಪಂಡಿತ್​ ರಂಗಮಂದಿವರೆಗೆ ನಡೆಯಲಿದೆ ಎಂದು ತಿಳಿಸಿದರು.
ಮಧ್ಯಾಹ್ನ 2ಕ್ಕೆ ನಗರದ ಡಾ.ಎಸ್​.ಎಂ.ಪಂಡಿತ್​ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಲಿದ್ದಾರೆ. ಎಂಎಲ್​ಸಿ ತಿಪ್ಪಣ್ಣಪ್ಪ ಕಮಕನೂರ ನೇತೃತ್ವದಲ್ಲಿ ಭಿನ್ನ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಶಾಸಕ ಅಲ್ಲಮಪ್ರಭು ಪಾಟೀಲ್​ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಾಧ್ಯಾಪಕ ಡಾ.ಎಚ್​.ಟಿ.ಪೋತೆ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಪ್ರಮುಖರಾದ ಸಾಯಿಬಣ್ಣ ನೀಲಪ್ಪಗೋಳ, ರವಿರಾಜ ಕೊರವಿ, ರಮೇಶ ನಾಟಿಕಾರ, ಬಸವರಾಜ ಹರವಾಳ, ಶಿವಾನಂದ ಹೊನಗುಂಟಿ, ವಿಜಯಕುಮಾರ ಹದಗಲ್​, ಶಾಂತಪ್ಪ ಕೂಡಿ, ಅಂಬು ಡಿಗ್ಗಿ, ಬಸವರಾಜ ಗುಂಡಲಗೇರಿ, ಶಾಮರಾವ ಸುಲ್ತಾನಪುರ ಇತರರಿದ್ದರು.

ಸಾಂಸತಿಕ ವೈಭವದ ಮೆರವಣಿಗೆ

ಚೌಡಯ್ಯ ಜಯಂತಿ ನಿಮಿತ್ತ ನಗರೇಶ್ವರ ಶಾಲೆಯಿಂದ ಬೆಳಗ್ಗೆ 11ಕ್ಕೆ ಚೌಡಯ್ಯನವರ ಬೃಹತ್​ ಸಾಂಸತಿಕ ವೈಭವದಿಂದ ನಡೆಯಲಿದ್ದು, ಚನ್ನಪಟ್ಟಣ ಹಾಗೂ ನವಲಗುಂದದ ಗೊಂಬೆಗಳ ಪ್ರದರ್ಶನ, ನಾಸಿಕ್​ ಡೋಲ್​, ಆಂಧ್ರಪ್ರದೇಶದ ಜಾನಪದ ಕಲಾ ತಂಡಗಳು, ಭಾಜಾ ಭಜಂತ್ರಿ, ಕಾಂತಾರ ಚಂಡಿ ಮೆರವಣಿಗೆ, ಮೈಲಾರಲಿಂಗೇಶ್ವರ ಗೊಂಬೆ ಬಳಗದ ಪ್ರದರ್ಶನ, ಹುಲಿಕುಣಿತ, ಒಂಟೆ, ಕುದುರೆಗಳ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು. ಗಂಗಾನಗರದಿಂದಲೂ 101 ಮುತೆದೆಯರು ಪೂರ್ಣಕುಂಭ ಕಲಶದೊಂದಿಗೆ ಮೆರವಣಿಗೆ ನಡೆಯಲಿದೆ. ಸಂಜೆ 6ಕ್ಕೆ ಎಸ್​ವಿ ವೃತ್ತದಿಂದ ಜಗತ್​ ವೃತ್ತದವರೆಗೆ ಚೌಡಯ್ಯ ಯುವಕ ಮಂಡಳಿಯಿಂದ ಬೃಹತ್​ ಮೆರವಣಿಗೆ ನಡೆಯಲಿದೆ ಎಂದು ಬಸವರಾಜ ಬೂದಿಹಾಳ ತಿಳಿಸಿದರು.

ಸಮಾಜದ ಬಲವರ್ಧನೆಗೆ ಕ್ರಮ

ಜಯಂತ್ಯುತ್ಸವದಲ್ಲಿ ಸಮಾಜದ ಶಕ್ತಿ ಪ್ರದರ್ಶನದ ಜತೆಗೆ ಸಮಾಜದ ಬಡ, ಪ್ರತಿಭಾವಂತರಿಗೆ ನೆರವು ನೀಡಿ, ಬಲವರ್ಧನೆಗೂ ಶ್ರಮಿಸಲಾಗುತ್ತಿದೆ. ಪ್ರತಿಭಾವಂತ ಐವರು ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ವಿತರಣೆ, ಅಂಗವಿಕಲರಿಗೆ ತ್ರಿಚಕ್ರ ವಿತರಣೆ, ಸರ್ಕಾರದ ಸೌಲಭ್ಯಗಳ ಪೂರೈಕೆಯ ಮಾಹಿತಿ ನೀಡುವುದು ಸೇರಿ ಸಮಾಜದ ಬಲವರ್ಧನೆಗೂ ಯೋಜನೆ ರೂಪಿಸಲಾಗಿದೆ. ಅಲ್ಲದೇ ಸಮಾಜಕ್ಕೆ ಹೆಚ್ಚಿನ ಅನುದಾನ, ಎಸ್​ಟಿ ಸೇರ್ಪಡೆ ಪ್ರಸ್ತಾವನೆ ಸೇರಿ ವಿವಿಧ ಬೇಡಿಕೆಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಚೌಡಯ್ಯ ಮೂರ್ತಿ ಸ್ಥಾಪನೆಗೆ ಸ್ಥಳ ನಿಗದಿಯಾಗಿದ್ದು, ಶ್ರೀ ಪ್ರತಿಷ್ಠಾಪನೆ ನೆರವೇರಲಿದೆ ಎಂದು ರವಿರಾಜ ಕೊರವಿ, ಶಾಂತಪ್ಪ ಕೂಡಿ, ಅವ್ವಣ್ಣ ಮ್ಯಾಕೇರಿ ತಿಳಿಸಿದರು.

ಇಂದು ಉಪನ್ಯಾಸ

ಜಯಂತಿ ನಿಮಿತ್ತ ಜ.20ರಂದು ಜಗತ್​ ವೃತ್ತದ ಬಳಿ ಬೃಹತ್​ ಬಹಿರಂಗ ಸಭೆ ನಡೆಸಿ, ವಿವಿಧ ಸಾಹಿತಿಗಳು, ಉಪನ್ಯಾಸಕರು, ತಜ್ಞರಿಂದ ಚೌಡಯ್ಯನವರ ವಚನ ಸಂಕೀರ್ಣ ವಿಶೇಷ ಉಪನ್ಯಾಸ ನಡೆಯಲಿದೆ. ರಸಮಂಜರಿ, ವಿವಿಧ ಜಾತಿ, ಧರ್ಮಗಳ ಸಾಧಕರು, ಸಾಹಿತಿಗಳಿಗೆ ಸನ್ಮಾನ ನಡೆಯಲಿದೆ. ಬೆಳಗ್ಗೆ 11ಕ್ಕೆ ಶರಣಬಸವೇಶ್ವರ ದೇವಸ್ಥಾನದಿಂದ ಜೀಪ್​ ರ್ಯಾಲಿ ನಡೆಯಲಿದ್ದು, ತಿಪ್ಪಣ್ಣಪ್ಪ ಕಮಕನೂರ ಚಾಲನೆ ನೀಡಲಿದ್ದಾರೆ ಎಂದರು.

ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ

ಚೌಡಯ್ಯನವರ ಮೆರವಣಿಗೆ ಹಿನ್ನೆಲೆಯಲ್ಲಿ ಬೆಳಗ್ಗೆ 11ಕ್ಕೆ ನಗರೇಶ್ವರ ಶಾಲೆ ಬಳಿ ಭಾವಚಿತ್ರದ ಮೇಲೆ ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ ನಡೆಯಲಿದ್ದು, ನಂತರ ಮೆರವಣಿಗೆ ಜಗತ್​ ವೃತ್ತಕ್ಕೆ ಬಂದಾಗಲೂ ಪುಸ್ಪವೃಷ್ಟಿ ನಡೆಯಲಿದೆ ಎಂದು ಜಯಪ್ರಕಾಶ ಕಮಕನೂರ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net