

ಕಲಬುರಗಿ: ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠವು ಕಳೆದ ಒಂದು ವರ್ಷದಲ್ಲಿ 188 ದಿನ ವಿಚಾರಣೆ ನಡೆಸಿ ಒಟ್ಟು 3,694 ಪ್ರಕರಣ ವಿಲೇವಾರಿ ಮಾಡಿದೆ. ಸಕಾಲಕ್ಕೆ ಮಾಹಿತಿ ನೀಡದ 80 ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ 7.78 ಲಕ್ಷ ರೂ. ದಂಡ ವಿಧಿಸಿದ್ದು, 35 ಅರ್ಜಿದಾರರಿಗೆ ಒಟ್ಟು 96 ಸಾವಿರ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ ಎಂದು ಕಲಬುರಗಿ ಪೀಠದ ಮಾಹಿತಿ ಆಯುಕ್ತ ಬಿ.ವೆಂಕಟಸಿಂಗ್ ತಿಳಿಸಿದರು.
ಪೀಠದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2025ರ ನ.25ರಿಂದ ಪ್ರಕರಣಗಳ ವಿಚಾರಣೆ ಆರಂಭಿಸಲಾಗಿದ್ದು, ಈವರೆಗೆ 7,262 ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ 3,694 ಪ್ರಕರಣ ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ವಿಧಿಸಿದ ದಂಡದಲ್ಲಿ 7.37 ಲ ರೂ. ವಸೂಲಿ ಮಾಡಲಾಗಿದೆ. ಕಲಬುರಗಿ ಪೀಠದಲ್ಲಿ ಮಾಹಿತಿ ಕೋರಿ ಈವರೆಗೆ ಒಟ್ಟು 20,398 ದ್ವೀತಿಯ ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 13,468 ಪ್ರಕರಣ ವಿಲೇವಾರಿಯಾಗಿದ್ದು, 6,930 ವಿಚಾರಣೆಗೆ ಬಾಕಿ ಉಳಿದಿವೆ. ಈ ವರ್ಷದ ಫೆಬ್ರವರಿಯಿಂದ ಕಲಬುರಗಿ ಪೀಠದಲ್ಲಿಯೇ ದ್ವೀತಿಯ ಮೇಲ್ಮನವಿ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಈವರೆಗೆ 2,432 ಅರ್ಜಿ ಸಲ್ಲಿಕೆಯಾಗಿವೆ ಎಂದು ವಿವರಿಸಿದರು.
ಜಿಲ್ಲಾವಾರು ಬಾಕಿ ಪ್ರಕರಣ: ರಾಯಚೂರು ಜಿಲ್ಲೆಯಲ್ಲಿ 2,059, ಕಲಬುರಗಿ 1,483, ಬಳ್ಳಾರಿ 885, ಯಾದಗಿರಿ 665, ಕೊಪ್ಪಳ 649, ವಿಜಯನಗರ 629 ಹಾಗೂ ಬೀದರ್ ಜಿಲ್ಲೆಯಲ್ಲಿ 560 ಪ್ರಕರಣಗಳು ಬಾಕಿ ಇವೆ ಎಂದು ಬಿ.ವೆಂಕಟಸಿಂಗ್ ಮಾಹಿತಿ ನೀಡಿದರು.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಕಲಬುರಗಿ ಪೀಠವು 2024ರಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಲೋಕೋಪಯೋಗಿ ಇಲಾಖೆ ಕಟ್ಟಡದಲ್ಲಿ ಪೀಠದ ಕಚೇರಿ ನಡೆಯುತ್ತಿದ್ದು, ಶಾಶ್ವತ ಕಟ್ಟಡ ನಿರ್ಮಾಣಕ್ಕೆ ನಿವೇಶನ ಒದಗಿಸುವಂತೆ ಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿಗಳಲ್ಲಿನ ಗೊಂದಲ ನಿವಾರಿಸುವ ಉದ್ದೇಶದಿಂದ ಏಳು ಜಿಲ್ಲೆಗಳಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ ಎಂದು ಬಿ.ವೆಂಕಟಸಿಂಗ್ ಹೇಳಿದರು.