

ಕಲಬುರಗಿ: ಬಸವಣ್ಣನವರ ಮಾನವೀಯ ನಡೆ-ನುಡಿ, ಬದುಕಿದ ರೀತಿ, ಸಮಾಜದಲ್ಲಿ ಗುರುತಿಸಿಕೊಂಡ ಬಗೆ ಎಲ್ಲೆಡೆ ಮೆಚ್ಚುಗೆ ಜತೆಗೆ ಅನುಸರಣೀಯವೂ ಆಗಿದೆ ಎಂದು ಶ್ರೀ ವೀರಮಹಾಂತ ಮಹಾಸ್ವಾಮೀಜಿ ನುಡಿದರು.
ಕೆಪಿಟಿಸಿಎಲ್, ಜೆಸ್ಕಾಂ ಅಧಿಕಾರಿಗಳು ಮತ್ತು ನೌಕರರ ಸಂಘದ ಸಹಯೋಗದಡಿ ನಗರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ೮೯೧ನೇ ಜಯಂತ್ಯುತ್ಸವದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಮಾನವೀಯತೆಗೆ ಇನ್ನೊಂದು ಹೆಸರೇ ಬಸವಣ್ಣ. ದಲಿತನೊಬ್ಬ ಬಸವಣ್ಣನವರ ಭೇಟಿಗೆ ಬಂದಾಗ ವಿರೋಧಿಗಳು ಆತನ ಕಣ್ಣಲ್ಲಿ ಮಣ್ಣು ಎರಚಿದ್ದರು. ಕಣ್ಣು ನೋವಿನಿಂದ ಕೆಳಗೆ ಬಿದ್ದ ಅವನನ್ನು ಬಸವಣ್ಣನವರು ಕೈ ಹಿಡಿದು ಮೇಲೆತ್ತಿ ಉಪಚರಿಸಿದರು. ಅವರ ಮಾನವೀಯತೆಗೆ ಇದಕ್ಕಿಂತ ಉತ್ತಮ ನಿದರ್ಶನ ಸಿಗಲಾರದು ಎಂದರು.
ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಸಂಸ್ಕಾರ ನೀಡುವುದರ ಜತೆಗೆ ಮಾನವೀಯತೆ, ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡುವುದನ್ನು ಕಲಿಸಬೇಕು. ಅದರೊಂದಿಗೆ ಬಸವೇಶ್ವರರ ತತ್ವಗಳ ಮಹತ್ವ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣನವರ್ ಮಾತನಾಡಿ, ಬಸವೇಶ್ವರರು ಸಾಮಾಜಿಕ, ವೈಚಾರಿಕ, ಭಕ್ತಿ, ವಚನ ಮತ್ತು ದಾಸೋಹ ಕ್ರಾಂತಿ ಮಾಡಿದ್ದಾರೆ. ಪ್ರಜಾಪ್ರಭುತ್ವ ಆಧಾರದ ಮೇಲೆ ಜಾತಿ, ಧರ್ಮಗಳನ್ನು ಬಿಟ್ಟು ಮಾನವ ಧರ್ಮದಲ್ಲಿ ಬದುಕಬೇಕು ಎಂದು ತಿಳಿಸಿಕೊಟ್ಟಿದ್ದಾರೆ ಎಂದರು.
ಪ್ರಾಧ್ಯಾಪಕಿ ಶಾಂತಾ ಜಿ.ಅಷ್ಟಗಿ ಮಾತನಾಡಿ, ಬಸವಣ್ಣನವರ ಜೀವನ, ಸಾಧನೆ, ಆದರ್ಶ ಮತ್ತು ಅವರು ಸಮಾಜಕ್ಕೆ ನೀಡಿದ ಸಂದೇಶಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಶಂಕರ ಅಡಕಿ ಅಧ್ಯಕ್ಷತೆ ವಹಿಸಿದ್ದರು. ತಾಂತ್ರಿಕ ನಿರ್ದೇಶಕ ಆರ್.ಡಿ. ಚಂದ್ರಶೇಖರ, ಕೆಪಿಟಿಸಿಎಲ್ ಕಲಬುರಗಿ ವಿಭಾಗದ ಮುಖ್ಯ ಅಭಿಯಂತರ ಗಿರಿಧರ ಕುಲಕರ್ಣಿ, ಮುಖ್ಯ ಆರ್ಥಿಕ ಅಧಿಕಾರಿ ಸಂತೋಷ ಹೆಬ್ಬಾರೆ, ಆರ್ಥಿಕ ಸಲಹೆಗಾರ ರಜಾಕ್‌ಮಿಯಾ, ಮುಖ್ಯ ಅಭಿಯಂತರ ಆರ್. ವೆಂಕಟೇಶಪ್ರಸಾದ, ಪ್ರಧಾನ ವ್ಯವಸ್ಥಾಪಕ ಎಂ.ಪಿ. ನಾಗರಾಜ, ಚಂದ್ರಕಾಂತ ಪಾಟೀಲ್, ವೆಂಕಟೇಶ, ಖಂಡಪ್ಪ ಸೋನವಾಣೆ , ಎಂ.ಎಂ. ಕಿತ್ತೂರು, ಸುವರ್ಣ ದಡೇದ್, ಆನಂದ ಕೆ.ಎ., ರಾಮಚಂದ್ರ ಎಸ್.ಜಿ., ಜೆ.ಎಂ. ಕರುಣಾಕರಶೆಟ್ಟಿ, ಬಾಬು ಕೋರೆ, ಮಹ್ಮದ್ ಮಿನಾಜುದ್ದೀನ್ ಇತರರಿದ್ದರು.
ಬಸವ ಜಯಂತಿ ನಿಮಿತ್ತ ಜೆಸ್ಕಾಂ ಕಚೇರಿಯಲ್ಲಿ ನಡೆದ ಶಿಬಿರದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ೨೧ ಲೀಟರ್ ರಕ್ತದಾನ ಮಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ರಚಿಸಿರುವ ಸಂವಿಧಾನದ ಮೂಲ ಆಶಯ ಬಸವೇಶ್ವರರ ತತ್ವದಲ್ಲಿದೆ. ಸಮಾನತೆ, ಸಹೋದರತ್ವ ಮತ್ತು ಆರ್ಥಿಕವಾಗಿ ಸದೃಢವಾಗಲು ಕಾಯಕವೇ ಕೈಲಾಸ ಎಂಬ ತತ್ವ ಹೇಳಿದ್ದಾರೆ. ಹೀಗಾಗಿ ಇವರಿಬ್ಬರ ಆಶಯ ಒಂದೇ ಆಗಿದೆ.
| ರವೀಂದ್ರ ಕರಿಲಿಂಗಣ್ಣನವರ್ ವ್ಯವಸ್ಥಾಪಕ ನಿರ್ದೇಶಕ, ಜೆಸ್ಕಾಂ