

ಕಲಬುರಗಿ: ವೀರಶೈವ ಲಿಂಗಾಯತ ಸಮಾಜವೂ ಒಳಪಂಗಡಗಳ ಬೇಗುದಿಯಿಂದ ಬಳಲುತ್ತಿದ್ದು, ಎಲ್ಲ ಭೇದ ಮರೆತು ಒಗ್ಗಟ್ಟಾದಾಗ ಮಾತ್ರ ಸಮಾಜದ ಸಮಸ್ಯೆಗಳಿಗೆ ಹೋರಾಡಲು ಶಕ್ತಿ ಬರುತ್ತದೆ. ಸಂಘಟನೆಗೆ ಆದ್ಯತೆ ನೀಡೋಣ ಎಂಬ ನಿರ್ಣಯ ಕೈಗೊಳ್ಳಲಾಯಿತು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ವೀರಶೈವ ಲಿಂಗಾಯತ ಯುವ ಸಮ್ಮಿಲನದಲ್ಲಿ ಮಾತನಾಡಿದ ಎಲ್ಲ ಯುವ ಮುಖಂಡರು ಸಮಾಜದ ಸಂಘಟನೆ ಕುರಿತು ಗಂಭೀರವಾಗಿ ಚರ್ಚಿಸಿದರು.
ವೀರಶೈವ ಲಿಂಗಾಯತರು ಆದಿ, ದೀಕ್ಷ, ಪಂಚಮ, ಗಾಣಿಗ ಎಂದು ಭೇದ ಮಾಡಲಾಗುತ್ತಿದೆ. ಪರಸ್ಪರ ಕಾಲೆಳೆಯುವ ಪ್ರಯತ್ನಗಳು ಸಾಗಿದ್ದರಿಂದ ಸಮಾಜ ಸುಧಾರಣೆ ಆಗುತ್ತಿಲ್ಲ. ಸಮಾಜದ ಹೋರಾಟ, ಸಂಘಟನೆಯ ಬಗ್ಗೆ ನಿಜವಾದ ಕಾಳಜಿ ಇರಬೇಕು. ಸಮಾಜದ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ಆಗಾಗ ಪಾಠ ಕಲಿಸಬೇಕು. ಹಳ್ಳಿ ಹಳ್ಳಿಗಳಲ್ಲಿ ಸಂಘಟನೆ ಮಾಡಬೇಕು ಎಂಬ ಅಭಿಪ್ರಾಯ ಹೇಳಿದರು.
ಬಲಿಷ್ಠ ಸಮಾಜವಾಗಿದ್ದರೂ ಹಳ್ಳಿಗಳಲ್ಲಿ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ, ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿವೆ, ವಿನಾಕಾರಣ ಕೇಸ್ ದಾಖಲಿಸಿ, ಹಿಂಸೆ ನೀಡಲಾಗುತ್ತಿದೆ. ಇದಕ್ಕೆ ತಡೆ ನೀಡಬೇಕು. ನಗರದ ೫೫ ವಾರ್ಡ್ಗಳಲ್ಲಿ ಸಮಾಜದ ಯುವಕರನ್ನು ಸೇರಿಸಬೇಕು. ಜಾಗೃತಿ ಮೂಡಿಸಬೇಕು. ಸಮಾಜದ ವಿಷಯ ಬಂದಾಗ ಎಲ್ಲದಕ್ಕೂ ಸಜ್ಜಾಗಿರಬೇಕು ಎಂದು ಪ್ರಮುಖರು ಸಲಹೆ ನೀಡಿದರು.
ಪಾಳಾದ ಶ್ರೀ ಗುರುಮೂರ್ತಿ ಶಿವಾಚಾರ್ಯರು ಮಾತನಾಡಿ, ಸಮಾಜದ ಪೂಜ್ಯರಲ್ಲು ಒಡಕುಗಳಿದ್ದು, ಸಮಾಜವೇ ಎದ್ದು ನಿಂತಾಗ ಪೂಜ್ಯರು ಒಗ್ಗೂಡಲಿದ್ದಾರೆ. ಯುವಕರ ಸಂಘಟನಾ ಕಾರ್ಯಕ್ಕೆ ಸದಾ ಜತೆಗಿರುವುದಾಗಿ ಭರವಸೆ ನೀಡಿದರು.
ದಯಾನಂದ ಪಾಟೀಲ್, ಶ್ರೀಧರ ನಾಗನಹಳ್ಳಿ, ಜಗದೀಶ ದೇಶಮುಖ, ಮಹೇಶ್ವಚಂದ್ರ ಪಾಟೀಲ್ ಕಣ್ಣಿ, ಉದಯ ಪಾಟೀಲ್, ಕಲ್ಯಾಣರಾವ ಪಾಟೀಲ್ ಕಣ್ಣಿ, ರಾಜು ಭವಾನಿ, ಸತೀಶ ಮಾಹೂರ, ವಿನೋದ ಪಾಟೀಲ ಸರಡಗಿ, ಆನಂದ ಕಣಸೂರ, ಲಕ್ಷ್ಮೀಕಾಂತ ಸ್ವಾದಿ, ರಾಹುಲ ಹೊನ್ನಳ್ಳಿ, ಚನ್ನವೀರ ಲಿಂಗನವಾಡಿ, ಅಮೃತ ಪಾಟೀಲ್, ಶರಣಗೌಡ ಎ.ಪಾಟೀಲ್, ಮಾಲಾ ಕಣ್ಣಿ, ವೀರೇಶ ಬಿರಾದಾರ ಉಪಳಾಂವ, ರವಿ ದೇಗಾಂವ, ಗುರುರಾಜ ಅಂಬಾಡಿ, ಸುನೀಲ ಮಹಾಗಾಂವಕರ್, ಅಣ್ಣಾರಾಯ ಹಿರೇಗೌಡ, ಕಿರಣ ಕಣ್ಣಿ, ಪ್ರಜ್ವಲ ಇತರರಿದ್ದರು.
ಪ್ರಮುಖ ಸಲಹೆಗಳು…
ಸ್ವಾಮೀಜಿಗೆ ಬೈದಾಗ ಬಾಯಿ ಬಿಚ್ಚಲಿಲ್ಲ ಇತ್ತೀಚೆಗೆ ವೀರಶೈವ ಲಿಂಗಾಯತ ಸಮಾಜದ ಸ್ವಾಮೀಜಿಗಳನ್ನು ಜನಪ್ರತಿನಿಧಿಯೊಬ್ಬರೂ ಬಾಯಿಗೆ ಬಂದ ಹಾಗೆ ಬೈದರು. ಏಕವಚನದಲ್ಲಿ ನಿಂದಿಸಿದರು. ಸಮಾಜದ ಯಾವುದೇ ಒಬ್ಬೇ ಒಬ್ಬ ರಾಜಕೀಯ ನಾಯಕ, ಮುಖಂಡ ಬಾಯಿ ಬಿಚ್ಚಲಿಲ್ಲ. ಖಂಡನೆ ಮಾಡಲಿಲ್ಲ. ಬೈದವರು ನಾಳೆ ಮನೆ, ಮಠ ಹೊಕ್ಕರೆ ಏನು ಮಾಡುವುದು?. ಕನಿಷ್ಠ ಸ್ವಾಭಿಮಾನವೂ ಇಲ್ಲದಂತೆ ರಾಜಕೀಯ ಮಾಡುವುದು ಬಿಟ್ಟು ಸಮಾಜದ ನೋವಿಗೆ ಸ್ಪಂದಿಸಬೇಕು ಎಂದು ಯುವ ಮುಖಂಡರು ಆಗ್ರಹಿಸಿದರು.