

ಕಲಬುರಗಿ: ಗೋಧೂಳಿಯ ಪವಿತ್ರ ಕಾಲದಲ್ಲಿ ಚಿನ್ನದಂತೆ ಹೊಳೆಯುವ ಸೂರ್ಯನ ಕಿರಣಗಳ ಸ್ಪರ್ಷದ ಬೆಳಕು, ಮುಸ್ಸಂಜೆಯ ತಂಪಿಗೆ ವಾದ್ಯ ಮೇಳಗಳ ನಿನಾದ, ಶಂಖನಾದದ ಝೇಂಕಾರಕ್ಕೆ ಶರಣಬಸವೇಶ್ವರ ಮಹಾರಾಜ್ ಕೀ ಜೈ, ಹರ ಹರ ಮಹಾದೇವ ಜೈಕಾರದೊಂದಿಗೆ ಭಕ್ತಿ, ಭಾವ ಸಡಗರ, ಸಂಭ್ರಮದ ಮಧ್ಯೆ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಅದ್ದೂರಿ ರಥೋತ್ಸವ ಲಕ್ಷಾಂತರ ಭಕ್ತರ ಜೈ ಘೋಷಣೆಗಳೊಂದಿಗೆ ಅದ್ದೂರಿಯಾಗಿ ನೆರವೇರಿತು.
ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ೨೦೩ನೇ ದಾಸೋಹ ಮಹಾಯಾತ್ರೆಯಲ್ಲಿ ಬುಧವಾರ ಸಂಜೆ ಜರುಗಿದ ವೈಭವದ ರಥೋತ್ಸವದ ವೈಭವದಲ್ಲಿ ಕಂಡು ಬಂದ ದಾಸೋಹಂ ಭಾವದ ಭಕ್ತಿಯ ಅಮೋಘ ದೃಶ್ಯವಿದು.
ಇಳಿ ಸಂಜೆಯ ಹೊತ್ತಾಗುತ್ತಲೇ ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಸಂಸ್ಥಾನದ ಪೀಠಾಧಿಪತಿ ಪೂಜ್ಯ ಶ್ರೀ ಡಾ.ಶರಣಬಸವಪ್ಪ ಅಪ್ಪ ಹಾಗೂ ಒಂಬತ್ತನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರು ರಥಕ್ಕೆ ಪೂಜೆ ಸಲ್ಲಿಸಿ, ಎರಡು ಸುತ್ತು ಹಾಕಿ, ದಾಸೋಹ ಮಹಾಮನೆಯಿಂದ ಶ್ರೀ ಶರಣಬಸವೇಶ್ವರರ ಪುರುಷ ಬಟ್ಟಲು, ಲಿಂಗ ಸಜ್ಜಿಗೆ ಪ್ರದರ್ಶಿಸಿ, ಶಂಕನಾದ ಮೊಳಗಿಸುವುದರೊಂದಿಗೆ ಐತಿಹಾಸಿಕ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವಕ್ಕೆ ಚಾಲನೆ ದೊರೆಯುತ್ತಿದ್ದಂತೆಯೇ ಭಕ್ತರ ಜೈಘೋಷಗಳು ಮುಗಿಲು ಮುಟ್ಟಿದವು. ಭಕ್ತರು ರಥದತ್ತ ಉತ್ತತ್ತಿ ಹಾಗೂ ಬಾಳೆಹಣ್ಣು ಎಸೆದು, ಭಕ್ತಿ ಅರ್ಪಿಸಿದರು. ದೇವಸ್ಥಾನದ ಇಡೀ ಆವರಣದಲ್ಲಿ ಲಕ್ಷಾಂತರ ಭಕ್ತರು ಕೂಡಿದ್ದು, ಎಲ್ಲೆಡೆ ಭಕ್ತ ಸಾಗರವೇ ಕಂಡು ಬಂತು. ತೇರು ಎಳೆದ ನಂತರವೂ ಭಕ್ತರು ಆಗಮನ ನಿರಂತರವಾಗಿ ಸಾಗಿತ್ತು. ರಾತ್ರಿ ೧೧ಗಂಟೆವರೆಗೂ ಭಕ್ತರು ಆಗಮಿಸಿ, ಶರಣಬಸವೇಶ್ವರರ ಗದ್ದುಗೆ, ರಥ, ಉಚ್ಛಾಯಿ, ದಾಸೋಹ ಮನೆಯಲ್ಲಿ ಶರಣರ ಸ್ಥಾನದ ದರ್ಶನ ಪಡೆದರು.
ನಗರ ಸೇರಿ ಜಿಲ್ಲೆ, ರಾಜ್ಯದ ವಿವಿಧ ಜಿಲ್ಲೆ ಮತ್ತು ನೆರೆ ರಾಜ್ಯಗಳಾದ ಮಹಾರಾಷ್ಟç, ತೆಲಂಗಾಣ, ಆಂಧ್ರಪ್ರದೇಶದ ಲಕ್ಷಾಂತರ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ರಥೋತ್ಸವ ಸಂಪನ್ನವಾಗುತ್ತಲೇ ವರ್ಣಮಯ ಮದ್ದು ಸಿಡಿಸಿ, ಇಡೀ ವಾತಾವರಣಕ್ಕೆ ಹೊಸ ಮೆರಗು ತುಂಬಲಾಯಿತು.