ಪಿಡಿಎ ಕಾಲೇಜಿನಲ್ಲಿ ತಂತ್ರಜ್ಞಾನ ಸಾಂಸ್ಕೃತಿಕ ಸಮ್ಮಿಲನ

DSC_8712
Published on

ಕಲಬುರಗಿ: ಸಾಂಪ್ರದಾಯಿಕ ಧಿರಿಸಿನಲ್ಲಿ ನವಯುವಕ, ಯುವತಿಯರ ಹೆಜ್ಜೆಗೆ ವಿದ್ಯಾರ್ಥಿಗಳ ಕೆಕೆ, ಹರ್ಷ, ಚಪ್ಪಾಳೆಯ ಪ್ರೋತ್ಸಾಹ, ನಾಸಿಕ ಡೋಲಿಗೆ ಭರ್ಜರಿ ಕುಣಿತ, ಡಿಜೆ ಸದ್ದಿಗೆ ಹೆಜ್ಜೆ ಹಾಕಿದ ವಿದ್ಯಾರ್ಥಿಗಳು ಒಂದೆಡೆಯಾದರೆ ಭವಿಷ್ಯದಲ್ಲಿ ಎದುರಾಗುವ ಹಲವು ಸಮಸ್ಯೆ, ಸವಾಲುಗಳಿಗೆ ವಿಜ್ಞಾನದಲ್ಲಿ ಕಂಡುಕೊಂಡ ಪರಿಹಾರಗಳ (ಪ್ರೊಜೆಕ್ಟ್​) ಪ್ರದರ್ಶನ...

ಇಂತಹ ಅಪರೂಪದ ಸಾಂಸತಿಕ ಮತ್ತು ವಿಜ್ಞಾನ, ತಂತ್ರಜ್ಞಾನದ ಸಮ್ಮಿಲನಕ್ಕೆ ಸಾಯಾಗಿದ್ದು ನಗರದ ಪೂಜ್ಯ ದೊಡ್ಡಪ್ಪ ಅಪ್ಪ (ಪಿಡಿಎ) ಇಂಜಿನಿಯರಿಂಗ್​ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ತಂತ್ರಜ್ಞಾನ, ಸಾಂಸತಿಕ ನಿರ್ಮಾಣ ಉತ್ಸವ. ಸೋಮವಾರ ಉದ್ಘಾಟನೆ ಸಮಾರಂಭ ನಡೆದಿದ್ದು, ಮಂಗಳವಾರ ಸಾಂಸತಿಕ ಕಾರ್ಯಕ್ರಮ ಮತ್ತು ವಿಜ್ಞಾನ, ತಂತ್ರಜ್ಞಾನಗಳ ನೂತನ ಆವಿಷ್ಕಾರ, ಯೋಜನೆಗಳ ಪ್ರದರ್ಶನ ಸ್ಪರ್ಧೆ ನಡೆಯಿತು.

ಬೆಳಗ್ಗೆ ವಿದ್ಯಾರ್ಥಿಗಳಿಂದ ಎಥ್ನಿಕ್​ ವಾಕ್​ ನಡೆದಿದ್ದು, ಸಾಂಪ್ರದಾಯಿಕ ಧಿರಿಸಿನಲ್ಲಿ ವಿದ್ಯಾರ್ಥಿಗಳು ಹೆಜ್ಜೆ ಹಾಕಿ, ಗಮನ ಸೆಳೆದರು. ನಂತರ ನಾಸಿಕ್​ ಡೋಲಿನ ಸದ್ದು ಇಡೀ ಕಾಲೇಜಿನ ಆವರಣದಲ್ಲಿ ಅನುರಣಿಸಿತು. ಮುಖ್ಯದ್ವಾರದಿಂದ ಕ್ಯಾಂಪಸ್​ ಒಳಗಿನವರೆಗೆ ಅದ್ದೂರಿ ಮೆರವಣಿಗೆಯಲ್ಲಿ ನೃತ್ಯ ಮಾಡುತ್ತ ವಿದ್ಯಾರ್ಥಿಗಳು ಪಾಲ್ಗೊಂಡರು. ಸಂಜೆ ಗೋವಾದ ಪ್ರೊಜೆಕ್ಟ್​ ನೈಂಟಿ &1 ಬ್ಯಾಂಡ್​ ತಂಡದಿಂದ ಸೆಲೆಬ್ರಿಟಿ ನೈಟ್​ ಕಾರ್ಯಕ್ರಮದಲ್ಲಿ ವಿವಿಧ ಹಾಡುಗಳು, ಸಂಗೀತದ ವಾದ್ಯಗೋಷ್ಠಿಯಲ್ಲಿ ವಿದ್ಯಾರ್ಥಿಗಳು ಕುಣಿದು ಕುಪ್ಪಳಿಸಿದರು.

ನವ ಆವಿಷ್ಕಾರಗಳ ಅನಾವರಣ: ಉತ್ಸವದ ನಿಮಿತ್ತ ಪಿಡಿಎ ಸೇರಿ ವಿವಿಧ ಇಂಜಿನಿಯರಿಂಗ್​ ಕಾಲೇಜುಗಳ ವಿದ್ಯಾರ್ಥಿಗಳಿಗೆ ತಂತ್ರಜ್ಞಾನದ ನೂತನ ಯೋಜನೆಗಳ (ಪ್ರೊಜೆಕ್ಟ್​) ರೂಪಿಸುವ ನಾಲ್ಕು ವಿಭಾಗದ ಸ್ಪರ್ಧೆಯಲ್ಲಿ 164 ತಂಡಗಳು ಪಾಲ್ಗೊಂಡಿದ್ದವು. ಟೆಕ್ನೋವಿಸನ್​ ವಿಭಾಗದಲ್ಲಿ 113 ತಂಡ ಭಾಗವಹಿಸಿದ್ದು, ಆರು ವಿಭಾಗಗಳಲ್ಲಿ ತಲಾ ಒಂದು ಪ್ರಥಮ ಬಹುಮಾನ ವಿತರಿಸಲಾಯಿತು. ಕೋಡ್ರೋಮ್​ ಮತ್ತು ಟೆಕ್ನೋ ಮೇಜ್​ ಸ್ಪರ್ಧೆಯಲ್ಲಿ ತಲಾ 20 ತಂಡ ಸ್ಪರ್ಧಿಸಿ, ತಮ್ಮ ಜ್ಞಾನಕೌಶಲ ಪ್ರದರ್ಶಿಸಿದವು. ಟೆಕ್​ ಹಂಟ್​ ಸ್ಪರ್ಧೆಯಲ್ಲಿ 12 ತಂಡ ಪಾಲ್ಗೊಂಡಿದ್ದವು.

ಮೂರು ಪ್ರಥಮ ಸ್ಥಾನ: ಎಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್​ ಇಂಜಿನಿಯರಿಂಗ್​ ವಿಭಾಗದಲ್ಲಿ ಪಿಡಿಎ ಕಾಲೇಜಿನ ಶ್ರೀಕೃಷ್ಣ, ಸೈಯದ್​ ಅಹದ್​, ಸೈಯದ್​ ಮುರ್ತಾಜ್​ ಹುಸೇನ, ತಲ್ಹಾ ಸುಫಿಯಾನ್​ ತಂಡ ಪ್ರಥಮ ಸ್ಥಾನ ಪಡೆಯಿತು. ಕಂಪ್ಯೂಟರ್​ ಸೈನ್ಸ್​ ಆ್ಯಂಡ್​ ಇಂಜಿನಿಯರಿಂಗ್​ನಲ್ಲಿ ಗೌರಿ, ಮೇನಾ, ಪ್ರೇರಣಾ ಅವರ ತಂಡ ಪ್ರಥಮ ಸ್ಥಾನ ಪಡೆಯಿತು. ಮೆಕ್ಯಾನಿಕಲ್​ ವಿಭಾಗದಲ್ಲಿ ಆರ್​.ವಿ.ಕುಂಜ, ನಿತೀಶ, ಶರಣಪ್ಪ, ವಿಷ್ಣುತಿರ್ಥ ಅವರ ತಂಡ ಪ್ರಥಮ ಸ್ಥಾನ ಪಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net