ನ್ಯಾಯವಾದಿ ಬರ್ಬರ ಕೊಲೆ ಮೂವರ ಸೆರೆ

IRANNAGOUDA PATIL (MURDER)
Published on

ಕಲಬುರಗಿ: ಜೇವರ್ಗಿ ರಸ್ತೆ ಸಾಯಿಮಂದಿರ ಬಳಿ ಗುರುವಾರ ಹಾಡಹಗಲೆ ನಡೆದಿದ್ದ ನ್ಯಾಯವಾದಿ, ಉದನೂರ ಗ್ರಾಮದ ಈರಣ್ಣಗೌಡ ಪಾಟೀಲ್ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಲ್ಬರ್ಗ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಶುಕ್ರವಾರ ಮೂವರನ್ನು ಬಂಧಿಸುವ ಮೂಲಕ ೨೪ ತಾಸಿನಲ್ಲೇ ಹಂತಕರ ಹೆಡೆಮುರಿ ಕಟ್ಟಿ ಕಂಬಿ ಎಣಿಸಲು ಕಳುಹಿಸಿದ್ದಾರೆ.

ಉದನೂರದವರೇ ಆಗಿರುವ ಮಲ್ಲಿನಾಥ ಬಸಣ್ಣ (೫೬), ಭಾಗಣ್ಣ ಅಲಿಯಾಸ್ ಭಗವಾನ್ ನಾಯ್ಕೋಡಿ, ಅವಣ್ಣಪ್ಪ ಭಗವಂತರಾಯ ನಾಯ್ಕೋಡಿ ಬಂಧಿತರು. ಇನ್ನುಳಿದವರ ಬಂಧನ ಜತೆಗೆ ಹತ್ಯೆಗೆ ಕಾರಣ ಏನು ಎಂಬುದರ ಪತ್ತೆಗೆ ತನಿಖೆ ತೀವ್ರಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆರ್.ಚೇತನ್ ತಿಳಿಸಿದ್ದಾರೆ.

ಹಂತಕರು ಜೇವರ್ಗಿಯಲ್ಲಿರುವ ಮಾಹಿತಿಯಂತೆ ಡಿಸಿಪಿ ಕನಿಕಾ ಸಿಕ್ರಿವಾಲ್, ಎಸಿಪಿ ರಾಜಣ್ಣ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಸುಶೀಲಕುಮಾರ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಲ್ಲದೆ ಕಲಬುರಗಿಗೆ ಕರೆತಂದು ವಿಚಾರಣೆ ನಡೆಸಿ ಹತ್ಯೆಗೆ ಕಾರಣ ಏನೆಂಬುದರ ಮಾಹಿತಿ ಕಲೆ ಹಾಕಿದ್ದಾರೆ. ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ವಿಶ್ವವಿದ್ಯಾಲಯ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net