

ಡಾ.ಸೈಯದ್ ಷಾ ಖುಸ್ರೋ ಹುಸೇನಿ ಇನ್ನೂ ನೆನಪು
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಐತಿಹಾಸಿಕ ಹಜರತ್ ಖ್ವಾಜಾ ಬಂದಾ ನವಾಜ್ ಗೇಸುದರಾಜ್ ದರ್ಗಾದ ಪೂಜ್ಯರಾಗಿದ್ದ ಸಜ್ಜಾದೆ ನಶೀನ್ ಡಾ.ಸೈಯದ್ ಷಾ ಖುಸ್ರೋ ಹುಸೇನಿ (೭೮) ಬುಧವಾರ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. ಧಾರ್ಮಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಹಿರಿಯ ಕೊಂಡಿಯೊAದು ಕಳಚಿದಂತಾಗಿದೆ.
ಮಾದರಿ ಕೆಲಸಗಳ ಮೂಲಕ ಅಪ್ರತಿಮ ಧಾರ್ಮಿಕ ನಾಯಕರಾಗಿದ್ದ ಅವರು ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು ಸೇರಿ ಅಪಾರ ಅನುಯಾಯಿಗಳನ್ನು ಅಗಲಿದ್ದಾರೆ.
ಕಲಬುರಗಿ ಕೆಬಿಎನ್ ದರ್ಗಾಕ್ಕೆ ಅವರ ತಂದೆ ಬಳಿಕ ೨೩ನೇ ಸಜ್ಜಾದೆ ನಶೀನ್ ಆಗಿದ್ದ ಡಾ.ಸೈಯದ್ ಷಾ ಖುಸ್ರೋ ಹುಸೇನಿ ಅವರು ದರ್ಗಾ ಅಭಿವೃದ್ಧಿ ಜತೆಗೆ ಉರುಸ್‌ಗೆ ಹೊಸ ಕಳೆ ನೀಡಿದ್ದರು. ದೇಶ-ವಿದೇಶಗಳಿಂದ ಲಕ್ಷಾಂತರ ಜನ ದರ್ಶನಕ್ಕೆ ಬರುತ್ತಿದ್ದರು. ಅವರ ಸಾಮಾಜಿಕ ಕಾರ್ಯಗಳನ್ನು ಪರಿಗಣಿಸಿ ಸರ್ಕಾರ ೨೦೧೭ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಅಲ್ಲದೆ ಹಲವಾರು ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನರಾಗಿದ್ದರು.
ಖಾಜಾ ಶಿಕ್ಷಣ ಸಂಸ್ಥೆಯನ್ನು ಹೆಮ್ಮರವಾಗಿ ಬೆಳೆಸುವಲ್ಲಿ ಮತ್ತು ಕೆಬಿಎನ್ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಡಾ.ಸೈಯದ್ ಷಾ ಖುಸ್ರೋ ಹುಸೇನಿ ಬಾಬಾ ಶ್ರಮಿಸಿದ್ದರು. ಬಡರೋಗಿಗಳಿಗೆ ಉತ್ತಮ ವೈದ್ಯಕೀಯ ಸೇವೆ ಸಿಗುವಂತೆ ಮಾಡಲು ಕೆಬಿಎನ್ ಆಸ್ಪತ್ರೆಗೆ ಹೊಸ ಕಟ್ಟಡದ ಜತೆಗೆ ಹೈಟೆಕ್ ಸ್ಪರ್ಶ ನೀಡಿದ್ದರು.
ಸಜ್ಜಾದರ ಅಗಲಿಕೆ ಸುದ್ದಿ ಹರಡುತ್ತಲೇ ದರ್ಗಾದ ಬಳಿಯಿರುವ ಅವರ ನಿವಾಸಕ್ಕೆ ಭಕ್ತರ ದಂಡು ಬರುತ್ತಿದೆ. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗುರುವಾರ ಅಂತಿಮ ಕಾರ್ಯಗಳನ್ನು ನಡೆಸಲು ಕುಟುಂಬದವರು ಹಾಗೂ ಆಪ್ತರು ಚರ್ಚೆ ನಡೆಸಿದ್ದು, ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಮುಂಜಾಗ್ರತಾ ಕ್ರಮವಾಗಿ ದರ್ಗಾ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಶೋಕ
ಸಜ್ಜಾದ ನಶೀನ್ ಡಾ.ಸೈಯದ್ ಷಾ ಖುಸ್ರೋ ಹುಸೇನಿ ಬಾಬಾ ನಿಧನಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ್, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್ ಧರ್ಮಸಿಂಗ್, ಶಾಸಕರಾದ ಬಿ.ಜಿ.ಪಾಟೀಲ್, ಬಿ.ಆರ್.ಪಾಟೀಲ್, ಎಂ.ವೈ.ಪಾಟೀಲ್,ಕನ್ನಿಜ್ ಫಾತಿಮಾ, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್ ಇನ್ನಿತರ ಗಣ್ಯರು ಕಂಬನಿ ಮಿಡಿದಿದ್ದಾರೆ.
=====