ಜೈಲು ಅಧೀಕ್ಷಕಿಗೆ ಕೈದಿಗಳಿಂದಲೇ ಬ್ಲಾಕ್‌ಮೇಲ್

GLB_Central Presion Jail
Published on

ಕಲಬುರಗಿ: ನಗರದ ಹೊರವಲಯದ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿಗೆ ಕೈದಿಗಳೇ ಬ್ಲಾಕ್‌ಮೇಲ್ ಮಾಡಿ ಕಾರ್ ಸ್ಫೋಟಿಸುವ ಬೆದರಿಕೆ ಹಾಕುವ ಜತೆಗೆ ಲಂಚದ ಆರೋಪ ಹೊರಿಸಿದ ಕುರಿತು ದೂರು ದಾಖಲಾಗಿದೆ.

ಈ ಕುರಿತು ಅಧೀಕ್ಷಕಿ ಡಾ.ಅನಿತಾ ಕೈದಿಗಳಾದ ಮುಸ್ತಫಾ ಸುಲ್ತಾನ್, ದೇವರಾಜ, ನಾಗರಾಜ ಬಾಳೆಗಾರ, ಶ್ರೀಕಾಂತ ಬೆನ್ನೂರ, ಶ್ರೀ ಶೈಲ ಹರಳಯ್ಯ, ಮೊಹಮ್ಮದ್ ನಾಸಿರ್, ಅಲ್ತಾಫ್‌ರಾಜ್ ಅಲಿ, ಹಸನ್ ಶೇಖ್ ವಿರುದ್ಧ ದೂರು ನೀಡಿದ್ದಾರೆ.

ಏನಿದೆ ದೂರಿನಲ್ಲಿ: ಜೈಲಿನ ಮುಖ್ಯ ಅಧೀಕ್ಷಕಿ ಆದಾಗಿನಿಂದ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಕೈದಿಗಳಿಗೆ ಅಕ್ರಮವಾಗಿ ಆಗುತ್ತಿದ್ದ ಅನುಕೂಲತೆ ಸ್ಥಗಿತವಾಗಿದ್ದನ್ನು ಸಹಿಸಲು ಆಗದೆ ಕೆಲ ಬಂಧಿಗಳು, ಪಟ್ಟಭದ್ರ ಹಿತಾಸಕ್ತಿಗಳು ಪಿತೂರಿ ಮಾಡುತ್ತಿದ್ದವು. ಬೆದರಿಸಿ, ಮಾನಸಿಕ ಕಿರುಕುಳ ನೀಡುತ್ತಿದ್ದರು. ಅಧೀಕ್ಷಕಿಗೆ ಪರಿಚಯವಿಲ್ಲದ ಅಪರಿಚಿತ ಮಹಿಳೆಯಾದ ನೂರಜಹಾನ್ ಎಂಬ ಹೆಸರಿನವಳಿಂದ ೧೦ ಸಾವಿರ ರೂ. ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ. ಇದರಲ್ಲಿ ಕೆಲ ಅಧಿಕಾರಿ, ಸಿಬ್ಬಂದಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಬಂಧಿಗಳು ಬೀಡಿ, ಸಿಗರೇಟ್, ತಂಬಾಕು ಸೇರಿ ಇತರೆ ನಿಷೇಧಿತ ವಸ್ತು ಬೇಕೆಂದು ಪ್ರತಿಭಟಿಸಿದ್ದು, ನಿಂದನೆ ಮಾಡಿದ್ದಾರೆ ಎಂದು ಡಾ.ಅನಿತಾ ನೀಡಿದ ದೂರಿನಂತೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರಿನಿಂದ ಕರೆ ಮಾಡಿಸಿದ್ರು: ಕಾರಾಗೃಹದಲ್ಲಿ ಹಲವು ಕೃತ್ಯದಲ್ಲಿ ಭಾಗಿಯಾಗಿದ್ದ ವಿಚಾರಣಾಧೀನ ಕೈದಿ ಜಮೀರ್ ಬಚ್ಚನ್‌ನ ಷಡ್ಯಂತ್ರದ ರೂವಾರಿಯಾಗಿದ್ದು, ಶಿಸ್ತು ಕ್ರಮದ ಮೇಲೆ ಬೇರೆ ಕಾರಾಗೃಹಕ್ಕೆ ವರ್ಗಾವಣೆಗೆ ಮುನ್ನ ಅಧೀಕ್ಷಕಿಯ ಕಾರ್ ಸ್ಫೋಟಿಸುವ ಸಂಚು ರೂಪಿಸಿದ್ದ. ಇತನೊಂದಿಗೆ ಕೈದಿಗಳಾದ ನಾಗರಾಜ ಬಾಳಿಗಾರ್, ಮುಸ್ತಫಾ ಸುಲ್ತಾನ್ ಕೈಜೋಡಿದ್ದಾರೆ ಎಂಬುದು ತಿಳಿದು ಬಂದಿದೆ. ಅಪರಿಚಿತ ಮಹಿಳೆಯಿಂದ ಕರೆ ಬಂದಿದೆ. ಕಾರು ಸ್ಪೋಟಿಸುವ ಮಾಹಿತಿ ಇರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಈ ಕಾರಾಗೃಹದಿಂದ ವರ್ಗಾವಣೆಯಾದ ಅರ್ಜುನ ರಾಠೋಡ್‌ನು ಕರೆ ಮಾಡಿದ್ದು, ದೃಢಪಟ್ಟಿದೆ. ಆತನನ್ನು ಅಲ್ಲಿನ ಜೈಲಾಧಿಕಾರಿಗಳು ವಿಚಾರಿಸಿದಾಗ ಕಾರ್‌ಸ್ಫೋಟಿಸುವ ಷಡ್ಯಂತ್ರವನ್ನು ಬಚನ್ ಮತ್ತು ಗ್ಯಾಂಗ್ ಮಾಡಿರುವುದು ತಿಳಿಸಿದ್ದಾನೆ ಎಂದು ದೂರಿನಲ್ಲಿ ಡಾ.ಅನಿತಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net