ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ಧರಣಿ

1207klb04
Published on

ಕಲಬುರಗಿ: ಜಿಲ್ಲೆಯ ಅನೇಕ ಗ್ರಾಮ ಪಂಚಾಯಿತಿಗಳಲ್ಲಿನ ಬಾಕಿ ವೇತನ ಬಿಡುಗಡೆ ಸೇರಿ ನಾನಾ ಬೇಡಿಕೆ ಈಡೇರಿಕಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ಕ್ಲರ್ಕ್ ಕಂ.ಡಿಇಒ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಕಲಬುರಗಿ ತಾಲೂಕು ಪಂಚಾಯಿತಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಪಿಡಿಒಗಳು ಡಿಜಿಟಲ್ ಸಹಿ ನೀಡಿದರೂ ಅಧ್ಯಕ್ಷರು ವಿಳಂಬ ಮಾಡುತ್ತಿದ್ದಾರೆ. ಪಂಪ್ ಆಪರೇಟರ್ ಸೇರಿ ಇತರೆ ಸಿಬ್ಬಂದಿ ಇದ್ದರೂ ಪಿಡಿಒಗಳು ಅವರಿಗೆ ಕೆಲಸ ನೀಡುತ್ತಿಲ್ಲ. ಎಲ್ಲ ಯೋಜನೆಗಳಿಗೂ ನಮ್ಮನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸಂಘಟನೆಗಳು ಕಾನೂನುಬಾಹಿರ ಕೆಲಸ ಮಾಡಲು ಒತ್ತಡ ಹೇರುತ್ತಿದ್ದಾರೆ. ಕೇಳದಿದ್ದರೆ ನಮ್ಮ ವಿರುದ್ಧ ದೂರು ನೀಡಿ ಕೆಲಸದಿಂದ ತೆಗೆಸುತ್ತೇವೆ ಎಂದು ಧಮಕಿ ಹಾಕುತ್ತಿದ್ದಾರೆ. ಸುಳ್ಳು ದೂರುಗಳು ಬಂದಲ್ಲಿ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಬಿಲ್ ಕಲೆಕ್ಟರ್ ಹಾಗೂ ಕ್ಲರ್ಕ್ ಕಂ ಡಿಇಒ ಬಡ್ತಿ ಹೊಂದಿರುವ ಕಡೆ ರೋಸ್ಟರ್ ಮೂಲಕ ನೇಮಕ ಮಾಡಿಕೊಳ್ಳಬೇಕು. ಹುದ್ದೆ ಖಾಲಿ ಇರುವ ಗ್ರಾಮ ಪಂಚಾಯಿತಿಗಳಿಗೆ ವರ್ಗಾವಣೆ ಬಯಸಿದಲ್ಲಿ ಮೇಲಧಿಕಾರಿಗಳಿಗೆ ಶಿಫಾರಸು ಮಾಡಿ ವರ್ಗಾವಣೆಗೆ ಸಹಕರಿಸಬೇಕು ಎಂದು ಕೋರಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಅಧ್ಯಕ್ಷ ಶರಣಬಸಪ್ಪ ಪಾಟೀಲ್, ಕಾರ್ಯದರ್ಶಿ ಶಿವಲೀಲಾ ಬಿರಾದಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net